ಮದ್ಯಸೇವನೆ ಮೂಲಭೂತ ಹಕ್ಕು ಎಂದ ಮಧ್ಯಪ್ರದೇಶ್ ಸಚಿವ

ಮಂಗಳವಾರ, 30 ಜೂನ್ 2015 (17:09 IST)
ನಮ್ಮ ದೇಶದಲ್ಲಿ ಎಂತೆಂತವರು ಅಧಿಕಾರಕ್ಕೆ ಬರುತ್ತಾರೋ? ಕೆಲವರು ಅತ್ಯಾಚಾರಿಗಳನ್ನು ಬೆಂಬಲಿಸಿಕೊಂಡು ಮಾತನಾಡಿದರೆ, ಇನ್ನು ಕೆಲವರು ಭಯೋತ್ಪಾದಕರನ್ನೇ ಬೆಂಬಲಿಸಿ ಮಾತನಾಡುತ್ತಾರೆ. ಇಂತಹ ಅಸಂಬದ್ಧ, ಬೇಜವಾಬ್ದಾರಿ ಹೇಳಿಕೆಗಳನ್ನು ನೀಡಿ ವಿವಾದ ಸೃಷ್ಟಿಸುವ, ಜನರಿಗೆ ಕೆಟ್ಟ ಸಂದೇಶ ನೀಡುವ ಸಚಿವರಿಗೇನೂ ಕೊರತೆಯಿಲ್ಲ ನಮ್ಮಲ್ಲಿ. ಇಂತವರನ್ನು ಕಟ್ಟಿಕೊಂಡು ನಾವು ದೇಶದ ಅಭಿವೃದ್ಧಿಯನ್ನು ನಿರೀಕ್ಷಿಸಿದ ಹಾಗೆ! ಅಂತವರ ಸಾಲಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿರುತ್ತಾರೆ ಮಧ್ಯಪ್ರದೇಶದ ಗೃಹ ಸಚಿವ ಬಾಬುಲಾಲ್ ಗೌರ್.
ಮದ್ಯಸೇವನೆ ಪ್ರತಿಯೊಬ್ಬರ ಮೂಲಭೂತ ಹಕ್ಕು ಮತ್ತು ಪ್ರತಿಷ್ಠೆಯ ಸಂಕೇತ ಎಂದಿದ್ದಾರೆ ಗೌರ್. 
 
ಭೋಪಾಲದಲ್ಲಿ ಮದ್ಯ ಮಾರುವ ಸಮಯವನ್ನು ರಾತ್ರಿ 10 ರಿಂದ 11.30ರವರೆಗೆ ವಿಸ್ತರಿಸುತ್ತಿರುವುದಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸದ ಗೌರ್ (85), "ಆಲ್ಕೋಹಾಲ್ ಸೇವನೆಯಿಂದ ಅಪರಾಧ ಹೆಚ್ಚುವುದಿಲ್ಲ. 'ಮದ್ಯ ಸೇವನೆ ನಂತರ ಜನರು ಬಾಹ್ಯ ಪ್ರಜ್ಞೆಯನ್ನು ಕಳೆದುಕೊಂಡಿರುತ್ತಾರೆ. ಅಂತವರು ಹೇಗೆ ಅಪರಾಧವೆಸಗಲು ಸಾಧ್ಯ? ಮಿತವಾಗಿ ಮದ್ಯ ಸೇವಿಸುವವರು ಅಪರಾಧಕ್ಕೆ ಕಾರಣವಾಗುವುದಿಲ್ಲ. ಆದರೆ ಮಿತಿ ಮೀರಿ ಕುಡಿಯಬಾರದು. ಕುಡಿಯುವುದು ಮೂಲಭೂತ ಹಕ್ಕು. ಈಗಿನ ಕಾಲದಲ್ಲಿ ಸಾಮಾಜಿಕ ಪ್ರತಿಷ್ಠೆಯ ಸಂಕೇತವದು", ಎಂದಿದ್ದಾರೆ.
 
ಗೌರ್ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುವುದು ಇದೇ ಮೊದಲಲ್ಲ. ಒಮ್ಮೆ ಅವರು ರಷ್ಯಾ ಪ್ರವಾಸಕ್ಕೆ ಹೋದಾಗ ಸ್ಥಳೀಯ ನಾಯಕರ ಪತ್ನಿಯ ಜತೆ ಧೋತಿ ಕುರಿತ ಸಂಭಾಷಣೆ ಮೂಲಕ ವಿವಾದ ಸೃಷ್ಟಿಸಿದ್ದರು. 
 
ಬೆಲ್ಟ್ ಅಥವಾ ಜಿಪ್ ಸಹಾಯವಿಲ್ಲದೆ ಧೋತಿಯನ್ನು ಹೇಗೆ ಉಡುತ್ತೀರಾ ಎಂದು ಮಹಿಳೆ ಪ್ರಶ್ನಿಸಿದಾಗ ಗೌರ್, 'ಧೋತಿ ಉಡುವ ಕಲೆಯನ್ನು ಹೇಳಿಕೊಡಲು ನಾನು ಸಿದ್ಧ. ಆದರೆ ಖಾಸಗಿಯಾಗಿ', ಎಂದು ಹೇಳುವ ಮೂಲಕ ವ್ಯಾಪಕ ಖಂಡನೆಗೆ ತುತ್ತಾಗಿದ್ದರು. 
 
ಕಳೆದ ವರ್ಷ ಅತ್ಯಾಚಾರದ ಕುರಿತು ಅವರು ನೀಡಿದ ಹೇಳಿಕೆ ಕೂಡ ವಿವಾದವನ್ನು ಸೃಷ್ಟಿಸಿತ್ತು. ಅತ್ಯಾಚಾರ 'ಸಾಮಾಜಿಕ ಅಪರಾಧ .ಕೆಲವೊಮ್ಮೆ ಇದು ತಪ್ಪು, ಮತ್ತೆ ಕೆಲವೊಮ್ಮೆ ಸರಿ', ಎಂದು ಅವರು ಹೇಳಿದ್ದರು. ಇದು ಅವರ ವೈಯಕ್ತಿಕ ಅಭಿಪ್ರಾಯ, ಪಕ್ಷದ್ದಲ್ಲ ಎಂದು ಹೇಳುವ ಮೂಲಕ ಬಿಜೆಪಿ ಮುಜುಗರದಿಂದ ಕಾಪಾಡಿಕೊಳ್ಳುವ ಪ್ರಯತ್ನ ನಡೆಸಿತ್ತು. 
 
ಚೆನ್ನೈಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ 'ಇಲ್ಲಿನ ಮಹಿಳೆಯರು ಸಭ್ಯ ಉಡುಗೆಗಳನ್ನು ತೊಡುವುದರಿಂದ ಇಲ್ಲಿ ಲೈಂಗಿಕ ಅಪರಾಧ ಪ್ರಕರಣಗಳು ಕಡಿಮೆ,' ಎಂದು ಅವರು ಹೇಳಿದ್ದರು.

ವೆಬ್ದುನಿಯಾವನ್ನು ಓದಿ