ಕುಡುಕ ಚಾಲಕ ಜೀವಂತ ಆತ್ಮಾಹುತಿ ಬಾಂಬ್ ದಳದ ಸದಸ್ಯನಂತೆ:ಕೋರ್ಟ್

ಬುಧವಾರ, 3 ಫೆಬ್ರವರಿ 2016 (18:11 IST)
ಕುಡಿದ ಮತ್ತಿನಲ್ಲಿರುವ ಚಾಲಕ ಜೀವಂತ ಆತ್ಮಾಹುತಿ ಬಾಂಬ್ ದಳದ ಸದಸ್ಯನಂತೆ ಎಂದು ದೆಹಲಿ ಕೋರ್ಟ್ ಅಭಿಪ್ರಾಯಪಟ್ಟಿದೆ.
 
ಕುಡಿದು ವಾಹನ ಚಾಲನೆ ಮಾಡಿದ್ದಕ್ಕಾಗಿ ಕೋರ್ಟ್ ಆರು ದಿನಗಳ ಜೈಲು ವಾಸ ಮತ್ತು 2 ಸಾವಿರ ರೂಪಾಯಿಗಳ ದಂಡ ವಿಧಿಸಿರುವ ಸ್ಥಳೀಯ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಬದ್ರಾಪುರ್ ನಿವಾಸಿಯಾದ ಜೋಗಿ ವರ್ಗಿಸ್ ಮೇಲ್ಮನವಿ ಸಲ್ಲಿಸಿದ್ದರು. 
 
ಜೋಗಿ ವರ್ಗಿಸ್ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯದ ಹೆಚ್ಚುವರಿ ನ್ಯಾಯಮೂರ್ತಿ ಲೋಕೇಶ್ ಕುಮಾರ್ ಶರ್ಮಾ ಸ್ಥಳೀಯ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದು ತೀರ್ಪು ನೀಡಿದ್ದಾರೆ. 
 
ನನ್ನ ಅಭಿಪ್ರಾಯದ ಪ್ರಕಾರ ಕುಡಿದ ಮತ್ತಿನಲ್ಲಿರುವ ವಾಹನ ಚಾಲಕ ಆತ್ಮಾಹುತಿ ಬಾಂಬ್ ದಳದ ಸದಸ್ಯನಂತೆ. ಅಪಘಾತವೆಸಗಿ ಅಮಾಯಕರ ಸಾವಿಗೆ ಕಾರಣವಾಗುವುದರೊಂದಿಗೆ ತಾನು ಕೂಡಾ ಅಪಘಾತಕ್ಕೆ ಬಲಿಯಾಗಬಹುದು. ಇಂತಹ ಚಾಲಕರ ವಿರುದ್ಧ ಕಠಿಣ ಶಿಕ್ಷೆ ಅನಿವಾರ್ಯವಾಗುತ್ತದೆ ಎಂದು ನ್ಯಾಯಮೂರ್ತಿ ಶರ್ಮಾ ಹೇಳಿದ್ದಾರೆ.   
 
ಕುಡಿದು ವಾಹನ ಚಲಾಯಿಸುವವರ ವಿರುದ್ಧ ಸಾರಿಗೆ ಮತ್ತು ಪೊಲೀಸ್ ಇಲಾಖೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಹೆಚ್ಚುವರಿ ನ್ಯಾಯಮೂರ್ತಿ ಲೋಕೇಶ್ ಶರ್ಮಾ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ