ನೇಪಾಳದಲ್ಲಿ ಭೂಕಂಪ: 450 ಭಾರತೀಯರು ಸ್ವದೇಶಕ್ಕೆ ವಾಪಾಸ್

ಭಾನುವಾರ, 26 ಏಪ್ರಿಲ್ 2015 (13:24 IST)
ನೇಪಾಳದಲ್ಲಿ ಭೂಕಂಪ ಸಂಭವಿಸಿದ ಪರಿಣಾಮ ಸಂಕಷ್ಟದಲ್ಲಿ ಸಿಲುಕಿದ್ದ 450 ಮಂದಿ ಭಾರತೀಯರನ್ನು ಕೇಂದ್ರ ಸರ್ಕಾರವು ಇಂದು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆ ತಂದಿದೆ.

ಹೌದು, ಸಾಕಷ್ಟು ಮಂದಿ ಭಾರತೀಯರು ನೆರೆ ರಾಷ್ಟ್ರ ನೇಪಾಳಕ್ಕೆ ಪ್ರವಾಸಕ್ಕೆಂದು ತೆರಳಿದ್ದರು. ಈ ವೇಳೆ ನಿನ್ನೆ ಭೂಕಂಪ ಸಂಭವಿಸಿದ ಪರಿಣಾಮ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದರು. ಇದನ್ನು ಅರಿತ ಭಾರತ ಸರ್ಕಾರ ನಾಗರೀಕರ ರಕ್ಷಣೆಗೆ ಮುಂದಾಗಿದ್ದು, ಈಗಾಗಲೇ 450 ಮಂದಿಯನ್ನು ಸುರಕ್ಷಿತವಾಗಿ ಕರೆತರಲಾಗಿದೆ.

ಇನ್ನು ಈ ಎಲ್ಲರಿಗೂ ಕೂಡ ದೆಹಲಿಯಲ್ಲಿರುವ ಕರ್ನಾಟಕ ಭದವನದಲ್ಲಿ ತಂಗುವ ವ್ಯವಸ್ಥೆ ಮಾಡಲಾಗಿದ್ದು, ಸುರಕ್ಷಿತವಾಗಿದ್ದಾರೆ ಎಂದು ಹೇಳಲಾಗಿದೆ.

ಇನ್ನು ಸುರಕ್ಷಿತವಾಗಿ ಮರಳಿರುವ ಕರ್ನಾಟಕ ಮೂಲದ ಪ್ರವಾಸಿಗ ನಾಗರೀಕ ಗುರುರಾಜ್ ಎಂಬುವವರು ಮಾಧ್ಯಮಗಳೊಂದಿಗೆ  ಮಾತನಾಡಿದ್ದು, ನಿನ್ನೆ ಬೆಳಗ್ಗೆ 11.30ರ ವೇಳೆಯಲ್ಲಿ ಭೂಕಂಪ ಸಂಭವಿಸಿತು. ಅದನ್ನು ನಾನು ಕಣ್ಣಾರೆ ಕಂಡೆ. ನನ್ನ ಕಣ್ಣೆದುರೇ ಪಶುಪತಿನಾಥ ದೇವಾಲಯದ ಪಕ್ಕದಲ್ಲಿಯೇ ಇದ್ದ ಹೋಟೆಲ್‌ವೊಂದು ನೆಲಕ್ಕುರುಳಿತು. ಆಗ ಅಲ್ಲಿನ ಸ್ಥಳೀಯರು ಭೂಕಂಪ ಎಂದು ಕಿರುಚಿ ಮೈದಾನವಿರುವತ್ತ ಪರಾರಿಯಾಗುತ್ತಿದ್ದರು ಎಂದ ಅವರು, ಊಟ, ನೀರು ಸಿಗದೆ ಪರದಾಡಿದೆವು. ಆದರೆ ಭಾರತ ರಕ್ಷಣಾ ಪಡೆಗಳು ನಮ್ಮನ್ನು ಬೇಗ ರಕ್ಷಿಸಿ ತಂದಿದ್ದು, ಪ್ರಸ್ತುತ ಸುರಕ್ಷವಾಗಿದ್ದೇವೆ ಎಂದಿದ್ದಾರೆ.

ಮೂಲಗಳ ಪ್ರಕಾರ, 450 ಮಂದಿಯಲ್ಲಿ 100 ಮಂದಿ ಕರ್ನಾಟಕ ರಾಜ್ಯದವರೇ ಸೇರಿದ್ದು, ಇತರರು ಇತರೆ ರಾಜ್ಯಗಳಿಗೆ ಸೇರಿದ ನಾಗರೀಕರು ಎನ್ನಲಾಗಿದೆ. 100ರ ಗುಂಪಿನಲ್ಲಿ ಮೈಸೂರು ಹಾಗೂ ಮಂಡ್ಯ ಜಿಲ್ಲೆಗೆ ಸೇರಿದ ನಾಗರೀಕರಿದ್ದಾರೆ.

ವೆಬ್ದುನಿಯಾವನ್ನು ಓದಿ