ಭಾರತವನ್ನು ಪ್ರವೇಶಿಸಿದ ಮಾರಾಣಾಂತಿಕ ಎಬೋಲಾ: ದೆಹಲಿಯಲ್ಲಿ ಪತ್ತೆ

ಬುಧವಾರ, 19 ನವೆಂಬರ್ 2014 (20:30 IST)
ದೇಶದಲ್ಲಿ ಮೊದಲ ಎಬೋಲಾ ಪ್ರಕರಣವು ರಾಜಧಾನಿ ದೆಹಲಿಯಲ್ಲಿ ಪತ್ತೆಯಾಗಿದೆ. ಲೈಬೀರಿಯಾದಿಂದ ದೆಹಲಿಗೆ ಬಂದಿಳಿದ ಭಾರತದ ಯುವಕನ (26)  ವೀರ್ಯದಲ್ಲಿ ಎಬೋಲಾ ವೈರಸ್‌ ಪತ್ತೆಯಾಗಿದೆ. ಆದರೆ ಈತನಲ್ಲಿ ರೋಗ ಲಕ್ಷಣಗಳು ಕಂಡುಬಂದಿಲ್ಲ.
 
ಈ ಯುವಕ ಸೆಪ್ಟೆಂಬರ್‌ನಲ್ಲಿ ಲೈಬೀರಿಯಾದ ಆಸ್ಪತ್ರೆಯಲ್ಲಿ ಎಬೋಲಾಗೆ ಚಿಕಿತ್ಸೆ ಪಡೆದುಕೊಂಡಿದ್ದ. ಈತ ಎಬೋಲಾದಿಂದ ಮುಕ್ತನಾಗಿದ್ದಾನೆ ಎಂದು ಲೈಬೀರಿಯಾ ಆರೋಗ್ಯ ಸಚಿವಾಲಯ ಪ್ರಮಾಣಪತ್ರ ನೀಡಿತ್ತು. ಇದೇ 10 ರಂದು ದೆಹಲಿಗೆ ಬಂದಿಳಿದ ಯುವಕನನ್ನು ವಿಮಾನ ನಿಲ್ದಾಣದಲ್ಲಿ ಕಡ್ಡಾಯವಾಗಿ ಎಬೋಲಾ ತಪಾಸಣೆಗೆ ಒಳಪಡಿಸಲಾಯಿತು. ರಕ್ತದಲ್ಲಿ ಎಬೋಲಾ ವೈರಸ್‌ ಕಂಡುಬರಲಿಲ್ಲ.
 
ಆದರೆ, ಆತನ ವೀರ್ಯದಲ್ಲಿ ಈ ವೈರಸ್‌ ಪತ್ತೆಯಾಗಿದೆ. ದೆಹಲಿಯ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ ಹಾಗೂ ಪುಣೆಯ ರಾಷ್ಟ್ರೀಯ ವೈರಾಣು ಸಂಸ್ಥೆಯಲ್ಲಿ ವೀರ್ಯ ತಪಾಸಣೆ  ನಡೆಸಲಾಗಿತ್ತು.
 
‘ಈ ವ್ಯಕ್ತಿಯಲ್ಲಿ ಈ ಕಾಯಿಲೆಯ ಸೂಚನೆಗಳು ಕಂಡುಬಂದಿಲ್ಲ. ಆದರೂ ಈತನನ್ನು ದೆಹಲಿ ವಿಮಾನನಿಲ್ದಾಣದ ವಿಶೇಷ ಆರೋಗ್ಯ ಘಟಕದಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ. ಯುವಕನ ದೇಹ ಸ್ರಾವಗಳಲ್ಲಿ (ಮೂತ್ರ, ವೀರ್ಯ ಇತ್ಯಾದಿ) ಎಬೋಲಾ ವೈರಸ್‌ ಇಲ್ಲ ಎಂದು ಖಚಿತವಾಗುವವರೆಗೂ ಇಲ್ಲಿಯೇ ಇರಿಸಲಾಗುತ್ತದೆ’ ಎಂದು ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ