ದೆಹಲಿಯಲ್ಲಿ ಚುನಾವಣಾ ರಂಗು: ನಿಯೋಜಿತ ಸಿಎಂ ಅಭ್ಯರ್ಥಿಗಳ ಆಸ್ತಿ ಘೋಷಣೆ

ಗುರುವಾರ, 22 ಜನವರಿ 2015 (10:29 IST)
ದೆಹಲಿಯ ಚುನಾವಣಾ ರಂಗು ದಿನದಿಂದ ದಿನಕ್ಕೆ ಕಾವೇರುತ್ತಿದ್ದು, ಪ್ರಮುಖವಾಗಿರುವ ಬಿಜೆಪಿ, ಕಾಂಗ್ರೆಸ್ ಹಾಗೂ ಎಎಪಿ ಪಕ್ಷಗಳ ನಿಯೋಜಿತ ಮುಖ್ಯಮಂತ್ರಿ ಅಭ್ಯರ್ಥಿಗಳು ತಮ್ಮ ಒಟ್ಟು ಆಸ್ತಿಯ ಮೌಲ್ಯವನ್ನು ಇಂದು ಘೋಷಿಸಿದ್ದಾರೆ.

ಪ್ರಮುಖ ಪಕ್ಷಗಳಾಗಿರುವ ಬೆಜೆಪಿ, ಕಾಂಗ್ರೆಸ್ ಹಾಗೂ ಎಎಪಿ ಪಕ್ಷಗಳ ನಿಯೋಜಿತ ಮುಖ್ಯಮಂತ್ರಿ ಅಭ್ಯರ್ಥಿಗಳು ತಮ್ಮ ಆಸ್ತಿ ಮೌಲ್ಯವನ್ನು ಘೋಷಿಸಿಕೊಂಡಿದ್ದಾರೆ. ಈ ಪೈಕಿ ಪ್ರಥಮ ಸ್ಥಾನದಲ್ಲಿ ಕಾಂಗ್ರೆಸ್‌ನ ಅಜಯ್ ಮಾಕೇನ್ ಅವರಿದ್ದು, ಅವರ ಒಟ್ಟು ಆಸ್ತಿ ಮೌಲ್ಯ 16 ಕೋಟಿಯಾಗಿದೆ. ಈ ಮೂಲಕ ಮೂವರು ಅಭ್ಯರ್ಥಿಗಳಲ್ಲಿ ಮಾಕೇನ್ ಶ್ರೀಮಂತರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಹಿಂದಿನ ಚುನಾವಣಾ ಅವಧಿಯಲ್ಲಿ ಮಾಕೇನ್ ತಮ್ಮ ಆಸ್ತಿ ಮಾಲ್ಯ 6 ಕೋಟಿ ಎಂದು ಘೋಷಿಸಿದ್ದರು.

ಅಂತೆಯೇ ಬಿಜೆಪಿಯ ನಿಯೋಜಿತ ಮುಖ್ಯಮಂತ್ರಿ ಅಭ್ಯರ್ಥಿ ಕಿರಣ್ ಬೇಡಿ ಅವರ ಒಟ್ಟು ಆಸ್ತಿಯ ಮೌಲ್ಯ 11.06 ಕೋಟಿ ಹಾಗೂ ಎಎಪಿಯ ಅರವಿಂದ್ ಕೇಜ್ರಿವಾಲ್ ಅವರು 2.1 ಕೋಟಿ ಎಂದು ಘೋಷಿಸಿಕೊಂಡಿದ್ದಾರೆ.

ಇನ್ನು ಕಣದಲ್ಲಿರುವ ಅಭ್ಯರ್ಥಿಗಳ ಪೈಕಿ ಹೇಳುವುದಾದರೆ ಅಕಾಲಿದಳದ ಅಭ್ಯರ್ಥಿ ಮಸೀಂದರ್ ಸಿಂಗ್ ಸಿರ್ಸಾ ಅವರ ಒಟ್ಟು ಆಸ್ತಿಯ ಮೌಲ್ಯ 239 ಕೋಟಿಯಾಗಿದ್ದು, ಕಣದಲ್ಲಿರುವ ಅಭ್ಯರ್ಥಿಗಳಲ್ಲಿಯೇ ಅತಿ ಶ್ರೀಮಂತರು ಎನಿಸಿಕೊಂಡಿದ್ದಾರೆ. ಇನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಪುತ್ರಿ ಶರ್ಮಿಸ್ತಾ ಮುಖರ್ಜಿ ಅವರೂ ಕೂಡ ಕಣದಲ್ಲಿದ್ದು ತಮ್ಮ ಒಟ್ಟು ಆಸ್ತಿ ಮೌಲ್ಯ 2.9 ಕೋಟಿ ಎಂದು ಘೋಷಿಸಿದ್ದಾರೆ.

ವೆಬ್ದುನಿಯಾವನ್ನು ಓದಿ