ತಾನು ಭಾರತದ 15 ನೇ ಪ್ರಧಾನಿಯಾಗುವುದು ಖಚಿತವಾಗುತ್ತಿದ್ದಂತೆ ಗಾಂಧೀನಗರದಲ್ಲಿನ ಮನೆಯಲ್ಲಿ ತಮ್ಮ ತಾಯಿ ಹೀರಾಬೆನ್ ಅವರನ್ನು ಭೇಟಿಯಾದ ನರೇಂದ್ರ ಮೋದಿ ಅವರ ಪಾದಕ್ಕೆರಗಿದರು. ಮಗನ ಸಾಧನೆಗೆ ಕಣ್ತುಂಬಿಕೊಂಡ ತಾಯಿ ಅವರ ತಲೆಯ ಮೇಲೆ ಕೈಯಿಟ್ಟು ಆಶೀರ್ವಾದ ಮಾಡಿದರು.
ಮೋದಿ ನೇತೃತ್ವದ ಪಕ್ಷಕ್ಕೆ ಭಾರತದ ಚುನಾವಣಾ ಇತಿಹಾಸದಲ್ಲಿ ಬಹುದೊಡ್ಡ ಗೆಲುವು ದೊರಕಿದ್ದು, 1984ರ ನಂತರ ಒಂದೇ ಪಕ್ಷ ಬಹುಮತವನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ.
ಬಹುಮತಕ್ಕೆ 272 ಸ್ಥಾನಗಳು ಅವಶ್ಯವಿದ್ದು, ಬಿಜೆಪಿ ಬಹುಮತವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದು, ಮೈತ್ರಿಕೂಟಗಳನ್ನು ಸೇರಿಸಿ ಮೋದಿ ಪಡೆ 300 ಸ್ಥಾನಗಳ ಗಡಿ ದಾಟಲಿದೆ.
ಮೋದಿ ಭೇಟಿಗೆ ಮೊದಲು ಅವರ ತಾಯಿ ಪ್ರಾರ್ಥನೆಯಲ್ಲಿ ತೊಡಗಿಕೊಂಡಿದ್ದರು. ಆಗ ಅವರನ್ನು ಭೇಟಿಯಾದ ಪತ್ರಕರ್ತರಿಗೆ" ಅವನಿಗೆ ನನ್ನ ಆಶೀರ್ವಾದವಿದೆ. ಅವನು ಈ ದೇಶವನ್ನು ಅಭಿವೃದ್ಧಿಯ ಕಡೆ ಮುನ್ನಡೆಸುತ್ತಾನೆ" ಎಂದು ಹೇಳಿದ್ದರು.
ಮೋದಿ ತಮ್ಮ ತವರು ರಾಜ್ಯವಾದ ಗುಜರಾತಿನ ವಡೋದರಾ ಮತ್ತು ಉತ್ತರಪ್ರದೇಶದಲ್ಲಿರುವ ದೇವನಗರಿ ವಾರಣಾಸಿಯಿಂದ ಕಣಕ್ಕಿಳಿದಿದ್ದು, ಎರಡು ಕ್ಷೇತ್ರಗಳಲ್ಲಿ ಭರ್ಜರಿ ಗೆಲುವನ್ನು ದಾಖಲಿಸಿದ್ದಾರೆ.
"ಅವನು ಒಂದು ದಿನ ಇಡೀ ದೇಶವನ್ನು ಮುನ್ನಡೆಸುತ್ತಾನೆ ಎಂದು ನಾವೆಂದು ಕಲ್ಪಿಸಿಕೊಂಡಿರಲಿಲ್ಲ. ಒಂದು ದಿನ ಅವನು ಮನೆ ಮತ್ತು ಕುಟುಂಬನ್ನು ಬಿಟ್ಟು ಹೋಗಿದ್ದ. ಅದು ಘಟಿಸಿ ಅನೇಕ ವರುಷಗಳ ನಂತರ ಅವನೆಲ್ಲಿದ್ದಾನೆ ನೋಡಿ" ಎಂದು ಮೋದಿ ಸಹೋದರಿ ಹೇಳಿದ್ದಾರೆ.
ಲೋಕಸಭಾ ಚುನಾವಣೆಾ ಫಲಿತಾಂಶದ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ