ಕೇಜ್ರಿವಾಲ್ ನಿವಾಸದ ಕರೆಂಟ್ ಬಿಲ್ ಎಷ್ಟು ಗೊತ್ತೆ?

ಮಂಗಳವಾರ, 30 ಜೂನ್ 2015 (12:42 IST)
ದೆಹಲಿ ಮುಖ್ಯಮಂತ್ರಿ, ಆಪ್ ನಾಯಕ ಅರವಿಂದ್ ಕೇಜ್ರಿವಾಲ್ ಎರಡು ತಿಂಗಳಿಗೆ ಎಷ್ಟು ವಿದ್ಯುಚ್ಚಕ್ತಿ ಬಳಸಿದ್ದಾರೆ ಗೊತ್ತೇ? ಹತ್ತಿರ ಹತ್ತಿರ 1 ಲಕ್ಷ ಶುಲ್ಕ ಪಾವತಿಸುವಷ್ಟು. ಸಿವಿಲ್ ಲೈನ್‌ನಲ್ಲಿರುವ ಸಿಎಂ ನಿವಾಸದ ಎರಡು ತಿಂಗಳ (ಎಪ್ರಿಲ್- ಮೇ)  ಕರೆಂಟ್ ಬಿಲ್ 91,000 ರೂಪಾಯಿಗಳೆಂಬ ಎಂಬ ಮಾಹಿತಿ ಆರ್.ಟಿ.ಐ ಅರ್ಜಿಯೊಂದಕ್ಕೆ ಬಂದಿರುವ ಉತ್ತರದಿಂದ ಬೆಳಕಿಗೆ ಬಂದಿದೆ. 

ವಕೀಲರಾಗಿ ಕಾರ್ಯ ನಿರ್ವಹಿಸುತ್ತಿರುವ ಮಾಹಿತಿ ಹಕ್ಕು ಕಾರ್ಯಕರ್ತರಾದ ವಿವೇಕ್ ಗಾರ್ಗ್ ಎಂಬುವವರು ಸಲ್ಲಿಸಿದ ಮಾಹಿತಿ ಹಕ್ಕು ಅರ್ಜಿಯಲ್ಲಿ ಈ ವಿಷಯ ಬಹಿಂರಗಗೊಂಡಿದೆ. ದೆಹಲಿ ಸರ್ಕಾರದ ಸಾಮಾನ್ಯ ಆಡಳಿತ ಇಲಾಖೆ ಅವರಿಗೆ ನೀಡಿರುವ ಮಾಹಿತಿ ಪ್ರಕಾರ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಕೇಜ್ರಿವಾಲ್ ನಿವಾಸದ ಕರೆಂಟ್ ಬಿಲ್ ಒಟ್ಟು 91,000 ರೂಪಾಯಿಗಳಾಗಿದೆ. ಬಿಲ್ ನಕಲು ಪ್ರತಿಯನ್ನು ಸಹ ಉತ್ತರದ ಜತೆ ನೀಡಲಾಗಿದೆ. 
 
ಆದರೆ ವಾಸ್ತವವಾಗಿ ಈ ಬಿಲ್ 1 ಲಕ್ಷ ರೂ.ಗಳನ್ನು ದಾಟುತ್ತದೆ ಎಂದು ವಿರೋಧ ಪಕ್ಷವಾದ ಬಿಜೆಪಿ ಹೇಳಿದೆ. ಜತೆಗೆ ಆಮ್ ಅದ್ಮಿ  ಸರ್ಕಾರದ ಇತರೆ ಸಚಿವರ ನಿವಾಸಗಳ ವಿದ್ಯುತ್ ಬಿಲ್ ಮಾಹಿತಿಯನ್ನು ಕಲೆ ಹಾಕಿ ಸಾರ್ವಜನಿಕವಾಗಿ ಬಹಿರಂಗ ಪಡಿಸುವುದಾಗಿ ತಿಳಿಸಿದೆ.
 
"ಅರವಿಂದ್ ಕೇಜ್ರಿವಾಲ್ ಅವರ ಗೃಹಕ್ಕೆ ಎರಡು ಮೀಟರ್ ಬೋರ್ಡ್‌ಗಳಿವೆ. ಈ ಎರಡು ಮೀಟರ್‌ಗಳಿಗೆ ಬಂದಿರುವ ಇತ್ತೀಚಿನ ಬಿಲ್ ಕ್ರಮವಾಗಿ 55,000 ರೂಪಾಯಿ 48,000 ರೂ. ಇವುಗಳನ್ನು ಒಟ್ಟುಗೂಡಿಸಿದರೆ 1,03,000 ರೂ.ಗಳಾಗುತ್ತವೆ. ಹೀಗಾಗಿ ಸಿಎಂ ನಿವಾಸಕ್ಕೆ ಬಂದಿರುವು ವಿದ್ಯುತ್ ಬಿಲ್ 1 ಲಕ್ಷವನ್ನು ದಾಟಿದೆ", ಎಂದು ದೆಹಲಿ ಬಿಜೆಪಿ ವಕ್ತಾರ ಪ್ರವೀಣ್ ಕಪೂರ್ ವಾದಿಸಿದ್ದಾರೆ. 
 
ಈ ಕುರಿತು ಪರಿಶೀಲನೆ ನಡೆಸಿದ ಬಳಿಕ ಸರ್ಕಾರ ಈ ಕುರಿತು ಸ್ಪಷ್ಟನೆ ನೀಡಲಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ