ಪಾಕಿಸ್ತಾನವನ್ನು ಪ್ರವೇಶಿಸಿ ಉಗ್ರರನ್ನು ಸದೆಬಡೆಯಿರಿ: ಭಾರತೀಯ ಸೇನೆಗೆ ಶಿವಸೇನೆ ಸಲಹೆ

ಮಂಗಳವಾರ, 6 ಅಕ್ಟೋಬರ್ 2015 (17:02 IST)
ಕಾಶ್ಮಿರದಲ್ಲಿ ನಡೆದ ಉಗ್ರರ ವಿರುದ್ಧದ ಎನ್‌ಕೌಂಟರ್‌ನಲ್ಲಿ ನಾಲ್ಕು ಸೈನಿಕರು ಹತರಾಗಿರುವ ಬಗ್ಗೆ ಕಟುವಾಗಿ ಪ್ರತಿಕ್ರಿಯೆ ನೀಡಿದ ಶಿವಸೇನೆ, ಪಾಕಿಸ್ತಾನ ಉಗ್ರರನ್ನು ಸ್ವತಂತ್ರ ಸೈನಿಕರಂತೆ ಬಿಂಬಿಸುತ್ತಿದೆ. ಪಾಕ್ ವಿರುದ್ಧ ಮೈನ್ಮಾರ್‌ನೊಳಗೆ ನಡೆಸಿದಂತೆ ದಾಳಿ ನಡೆಸಬೇಕು ಎಂದು ಕೇಂದ್ರ ಸರಕಾರವನ್ನು ಒತ್ತಾಯಿಸಿದೆ.
   
ಪಾಕಿಸ್ತಾನ ಭಯೋತ್ಪಾದಕರಿಗೆ ಬೆಂಬಲ ನೀಡುತ್ತಿದೆ ಎನ್ನುವ ಬದಲಿಗೆ ಪಾಕಿಸ್ತಾನ ಉಗ್ರರಿಗೆ ಸ್ವತಂತ್ರ ಸೈನಿಕನ ಸ್ಥಾನಮಾನ ನೀಡಿದೆ ಎನ್ನುವುದು ಸೂಕ್ತ ಎಂದು ಶಿವಸೇನೆಯ ಮುಖವಾಣಿ ಸಾಮ್ನಾದಲ್ಲಿ ಪ್ರಕಟಿಸಿದೆ.
 
ಉಗ್ರರನ್ನು ಸದೆಬಡೆಯಲು ಮೈನ್ಮಾರ್‌ಗೆ ನುಸುಳಿ ಹತ್ಯೆ ಮಾಡಿದಂತೆ, ಪಾಕ್ ಆಕ್ರಮಿತ ಕಾಶ್ಮಿರದಲ್ಲೂ ಇಂತಹ ಕಾರ್ಯಾಚರಣೆ ನಡೆಸುವುದು ಅಗತ್ಯವಾಗಿದೆ ಎಂದು ಶಿವಸೇನೆ ಅಭಿಪ್ರಾಯಪಟ್ಟಿದೆ.
 
ಪಾಕ್ ಆಕ್ರಮಿತ ಕಾಶ್ಮಿರದ ಮೇಲೆ ವೈಮಾನಿಕ ದಾಳಿ ನಡೆಸುವ ಬಗ್ಗೆ ಕೇಂದ್ರದಲ್ಲಿ ಅಧಿಕಾರದಲ್ಲಿರುವ ರಾಜಕಾರಣಿಗಳು ತೆಗೆದುಕೊಳ್ಳುವ ನಿರ್ಧಾರದ ಮೇಲೆ ಅವಲಂಬಿತವಾಗಿರುತ್ತದೆ ಎಂದು ಭಾರತೀಯ ವಾಯು ಸೇನೆ ಮುಖ್ಯಸ್ಥ ಅರುಪ್ ರಹಾ ನೀಡಿದ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸೇನೆ, ಪಾಕ್ ಆಕ್ರಮಿತ ಕಾಶ್ಮಿರದ ಮೇಲೆ ದಾಳಿ ಮಾಡುವ ಸಾಮರ್ಥ್ಯ ಸೇನೆಗಿದೆ. ಆದರೆ ರಾಜಕೀಯ ಇಚ್ಚಾಶಕ್ತಿ ಕೊರತೆ ಎದ್ದು ಕಾಣುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
 
ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಭಾರತೀಯ ಸೈನಿಕರನ್ನು ಬಲಿಕೊಡುತ್ತಿದ್ದೇವೆ ಇದೆಂತಹ ಶೂರತನ? ಒಂದು ಬಾರಿ ಭಾರತೀಯ ಸೇನೆ ಪಾಕಿಸ್ತಾನವನ್ನು ಪ್ರವೇಶಿಸಿ ಉಗ್ರರನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು ಎಂದು ಒತ್ತಾಯಿಸಿದೆ.
 
ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದ ಶಿವಸೇನೆ, ಭಾರತೀಯ ಸೈನಿಕರಿಂದ ಹತರಾದ ಉಗ್ರರಿಗೆ ಪಾಕಿಸ್ತಾನ ಹುತಾತ್ಮರ ಪಟ್ಟ ನೀಡುತ್ತಿದೆ ಎಂದು ಶಿವಸೇನೆ ಆರೋಪಿಸಿದೆ.

ವೆಬ್ದುನಿಯಾವನ್ನು ಓದಿ