ಉದ್ಯೋಗಿಗಳ ಭವಿಷ್ಯ ನಿಧಿ ಮೇಲಿನ ತೆರಿಗೆ ಕೂಡಲೇ ಸರಕಾರ ಹಿಂಪಡೆಯಿಲಿ: ರಾಹುಲ್ ಗಾಂಧಿ

ಗುರುವಾರ, 3 ಮಾರ್ಚ್ 2016 (15:57 IST)
ಉದ್ಯೋಗಿಗಳ ಭವಿಷ್ಯ ನಿಧಿಯ ಮೇಲೆ ತೆರಿಗೆ ವಿಧಿಸುವುದು ಸರಿಯಲ್ಲ ಕೂಡಲೇ ಹಿಂಪಡೆಯಬೇಕು ಎಂದು ಕೇಂದ್ರ ಸರಕಾರವನ್ನು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ. 
 
ಸಂಸತ್ತಿನ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಪ್ಪು ಹಣ ಹೊಂದಿರುವ ಕಳ್ಳರಿಗಾಗಿ ಕೇಂದ್ರ ಸರಕಾರ ಫೇರ್ ಆಂಡ್ ಲವ್ಲಿ ಯೋಜನೆ ಜಾರಿಗೆ ತರುತ್ತದೆ. ಪ್ರಾಮಾಣಿಕವಾಗಿ ಜೀವನ ಸಾಗಿಸಿ ಉದ್ಯೋಗದ್ಲಲಿ ತೊಡಗಿರುವವರ ಭವಿಷ್ಯ ನಿಧಿಯ ಮೇಲೆ ಸರಕಾರ ತೆರಿಗೆ ಹಾಕುವುದು ಯಾವ ನ್ಯಾಯ ಎಂದು ಕಿಡಿಕಾರಿದರು. 
 
ಉದ್ಯೋಗಿಗಳು ನಿವೃತ್ತರಾಗುವ ಸಂದರ್ಭದಲ್ಲಿ ಆಸರೆಯಾಗುವಂತಹ ಭವಿಷ್ಯ ನಿಧಿಯ ಮೇಲೆ ತೆರಿಗೆ ಹಾಕುವುದು ಕ್ರೂರತನದ ಪರಮಾವಧಿ. ಕೇಂದ್ರ ಸರಕಾರ ಭವಿಷ್ಯ ನಿಧಿ ಮೇಲಿನ ತೆರಿಗೆ ಹಿಂಪಡೆಯದಿದ್ದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
 
2016-2017ರ ಸಾಲಿನ ಕೇಂದ್ರ ಬಜೆಟ್ ಮಂಡನೆ ಸಂದರ್ಭದಲ್ಲಿ ಹಣಕಾಸು ಖಾತೆ ಸಚಿವ ಅರುಣ್ ಜೇಟ್ಲಿ, ಉದ್ಯೋಗಿಗಳು ಏಪ್ರಿಲ್ 1 ರಿಂದ ಭವಿಷ್ಯ ನಿಧಿ ಹಿಂಪಡೆಯುವಾಗ ಶೇ.60 ರಷ್ಟು ಹಣಕ್ಕೆ ತೆರಿಗೆ ನೀಡಬೇಕಾಗುತ್ತದೆ ಎಂದು ಹೇಳಿಕೆ ನೀಡಿರುವುದು ವಿಪಕ್ಷಗಳಲ್ಲಿ ಆಕ್ರೋಶ ಮೂಡಿಸಿದೆ. 

ವೆಬ್ದುನಿಯಾವನ್ನು ಓದಿ