ನರೇಂದ್ರ ಮೋದಿಗಿಂತ ಕಟುಕನೇ ಲೇಸು: ಲಾಲು ಪ್ರಸಾದ್ ಯಾದವ್

ಮಂಗಳವಾರ, 29 ಏಪ್ರಿಲ್ 2014 (15:30 IST)
ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧದ ಟೀಕೆಯನ್ನು ಮುಂದುವರೆಸಿರುವ ಆರ್‪ಜೆಡಿ ನಾಯಕ ಲಾಲು ಪ್ರಸಾದ ಯಾದವ್,  ಪ್ರಧಾನಿಯಾಗುವ ಗುರಿಯನ್ನು ಹೊತ್ತಿರುವ ಮೋದಿಯನ್ನು ಕಂಡರೆ ಕಟುಕನು ನಾಚಿಕೆ ಪಟ್ಟುಕೊಳ್ಳುತ್ತಾನೆ ಎಂದು ಹೇಳಿದ್ದಾರೆ. 
 
"ನರೇಂದ್ರ ಮೋದಿಯನ್ನು ನೋಡಿದರೆ ಕಟುಕನು ಕೂಡ ನಾಚಿಕೆ ಪಟ್ಟುಕೊಳ್ಳುತ್ತಾನೆ. ಅಂತಹದರಲ್ಲಿ ಈ ಮನುಷ್ಯ ಭಾರತದ ಪ್ರಧಾನಿಯಾಗಲು ಸಾಧ್ಯವೇ?" ಎಂದು ಲಾಲು ಪ್ರಶ್ನಿಸಿದ್ದಾರೆ. 
 
ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಎಲ್ಲೆ ಮೀರಿದ ಪದಗಳ ಯುದ್ಧದ ಹಿನ್ನೆಲೆಯಲ್ಲಿ ಲಾಲು ಈ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. 
 
ಕಳೆದ ವಾರ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಮೋದಿ ಟೀಕಿಸಿದ್ದರಿಂದ, ಮೋದಿಯನ್ನು ತೃಣಮೂಲ ಕಾಂಗ್ರೆಸ್  " ಗುಜರಾತಿನ ಕಟುಕ " ಎಂದು ತಿರುಗೇಟು ನೀಡಿತ್ತು.
 
"ಬಂಗಾಳದ ಅಭಿವೃದ್ಧಿ ಮಾದರಿಯ ಬಗ್ಗೆ ಮೋದಿ ನಿರುತ್ತರರಾಗಿದ್ದಾರೆ. ಆದ್ದರಿಂದ ವೈಯಕ್ತಿಕ ಆಕ್ರಮಣ ಮಾಡುತ್ತಿದ್ದಾರೆ" ಎಂದು ಟಿಎಂಸಿ ವಕ್ತಾರರಾದ ಬ್ರಿಯೆನ್ ಟ್ವಿಟ್ ಮಾಡಿದ್ದರು. 
 
ತನ್ನ ಹೆಂಡತಿಯನ್ನು ಕಾಳಜಿಯಿಂದ ನೋಡಿಕೊಳ್ಳಲಾಗದ ಗುಜರಾತಿನ ಕಟುಕ, ಮಹಾನ್ ದೇಶವನ್ನು ಹೇಗೆ ಕಾಳಜಿಯಿಂದ ನೋಡಿಕೊಳ್ಳಬಲ್ಲ ಎಂದು ಅವರು ತಮ್ಮ ಮತ್ತೊಂದು ಟ್ವಿಟ್ಟರ್‌ನಲ್ಲಿ ಪ್ರಶ್ನಿಸಿದ್ದರು.  
 
ತಮ್ಮ ಸಾರ್ವಜನಿಕ ಭಾಷಣಗಳಲ್ಲಿ, ಶಾರದಾ ಹಗರಣವನ್ನು ಪ್ರಸ್ತಾಪಿಸಿ ಮಮತಾ ಬ್ಯಾನರ್ಜಿಯನ್ನು ಟೀಕಿಸಿದ್ದ ಮೋದಿ, ಮಮತಾ ಬಂಗಾಳದ ಜನರ ಕನಸನ್ನು ನಾಶ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು. 
 
ಇದರಿಂದ ಕ್ರೋಧಗೊಂಡಿರುವ ತೃಣಮೂಲ ಕಾಂಗ್ರೆಸ್ ಕೂಡ ಬಿಜೆಪಿ ನಾಯಕನ ವಿರುದ್ಧ ಎಗ್ಗಿಲ್ಲದೇ ವಾಕ್ ಪ್ರಹಾರ ನಡೆಸುತ್ತಿದೆ. 

ವೆಬ್ದುನಿಯಾವನ್ನು ಓದಿ