ಬಿಜೆಪಿ ಒಂದು ವರ್ಷ ಅಧಿಕಾರ ನಡೆಸಿದ್ರೂ ಅಚ್ಚೇ ದಿನ್ ಬರಲಿಲ್ಲ: ಠಾಕ್ರೆ ವಿಷಾದ

ಗುರುವಾರ, 23 ಜುಲೈ 2015 (15:39 IST)
ದೇಶದ ಜನತೆಗೆ ಮುಂದೆ ಅಚ್ಚೆ ದಿನಗಳು ಬರುತ್ತವೆ ಎಂದು ಆಶ್ವಾಸನೆ ನೀಡಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಸರಕಾರ ಒಂದು ವರ್ಷ ಅಧಿಕಾರವಧಿ ಕಳೆದರೂ ಅಚ್ಚೇದಿನ್ ಬರಲಿಲ್ಲ ಎಂದು ಶಿವಸೇನೆ ಮುಖ್ಯಸ್ಥ ಉದ್ಭವ್ ಠಾಕ್ರೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
 
ಸಂಸತ್ತಿನ ಒಳಗೆ ವಿಪಕ್ಷಗಳಿಂದ ಭಾರಿ ಪ್ರತಿರೋಧ ಎದುರಿಸುತ್ತಿರುವ ಮೋದಿ ಸರಕಾರಕ್ಕೆ ಸಂಸತ್ತಿನ ಹೊರಗೆ ಮೈತ್ರಿಪಕ್ಷವಾದ ಶಿವಸೇನೆ ಟೀಕಿಸುತ್ತಿರುವುದು ನುಂಗಲಾರದ ತುತ್ತಾಗಿ ಪರಿಣಮಿಸಿದೆ.
 
ಯುಪಿಎ ಸರಕಾರದ ಕೊಳೆಯನ್ನು ತೊಳೆಯಲು 50 ವರ್ಷಗಳಾದರೂ ಸಾಕಾಗುವುದಿಲ್ಲ. ಆದರೆ, ಮುಂಬರುವ ನಾಲ್ಕು ವರ್ಷಗಳಲ್ಲಿ ಜನತೆಯ ಆಶೋತ್ತರಗಳನ್ನು ಈಡೇರಿಸುವುದು ಅಗತ್ಯವಾಗಿದೆ. ಜನತೆಗೆ ಅಚ್ಚೇ ದಿನ್ ಬರಲಿವೆ ಎಂದು ಬಿಜೆಪಿ ಹೇಳಿಕೆ ನೀಡಿ ಇದೀಗ ಜನತೆಯನ್ನು ವಂಚಿಸಿದಂತಾಗಿದೆ ಎಂದು ಠಾಕ್ರೆ ತಿಳಿಸಿದ್ದಾರೆ.
 
ಮಹಾರಾಷ್ಟ್ರ ಮತ್ತು ಕೇಂದ್ರದಲ್ಲಿ ಸರಕಾರಗಳು ಬದಲಾಗಿವೆ. ಆದರೆ, ಜನಸಾಮಾನ್ಯ ಜೀವನದಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
 
ಜಮ್ಮು ಕಾಶ್ಮಿರದಲ್ಲಿ ಪಿಡಿಪಿ ಪಕ್ಷದೊಂದಿಗೆ ಮೈತ್ರಿಮಾಡಿಕೊಂಡು ಸರಕಾರ ರಚಿಸಿದ ಬಿಜೆಪಿ, ಜಮ್ಮು ಕಾಶ್ಮಿರದಲ್ಲಿ ಪ್ರತಿಭಟನಾಕಾರರು ಪಾಕಿಸ್ತಾನ ಮತ್ತು ಐಸಿಎಸ್ ಧ್ವಜಗಳನ್ನು ಹಾರಿಸುತ್ತಿದ್ದರೂ ಬಿಜೆಪಿ ಯಾಕೆ ಮೌನವಾಗಿದೆ ಎಂದು ಶಿವಸೇನೆ ಮುಖ್ಯಸ್ಥ ಉದ್ಭವ್ ಠಾಕ್ರೆ ತರಾಟೆಗೆ ತೆಗೆದುಕೊಂಡಿದ್ದಾರೆ. 
 

ವೆಬ್ದುನಿಯಾವನ್ನು ಓದಿ