ಬಿಹಾರ್‌: ಬಿಜೆಪಿ ಸೋತರೂ ರಾಜ್ಯದ ಅಭಿವೃದ್ಧಿಗೆ ಬದ್ಧ ಎಂದ ರಾಜನಾಥ್ ಸಿಂಗ್

ಸೋಮವಾರ, 12 ಅಕ್ಟೋಬರ್ 2015 (19:18 IST)
ಪ್ರತಿಯೊಂದು ಚುನಾವಣೆ ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯ ವಿಷಯವಾಗಿರುತ್ತದೆ. ಒಂದು ವೇಳೆ ಬಿಹಾರ್‌ನಲ್ಲಿ ಬಿಜೆಪಿ ಸೋಲನುಭವಿಸಿದರೂ ಬಿಹಾರ್ ರಾಜ್ಯದ ಅಭಿವೃದ್ಧಿಗಾಗಿ ಕೇಂದ್ರ ಸರಕಾರ ಶ್ರಮಿಸುತ್ತದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
 
ಬಿಹಾರ್ ರಾಜ್ಯದಲ್ಲಿ ಬಿಜೆಪಿ ಸರಕಾರ ರಚನೆಯಾಗದಿದ್ದರೂ ರಾಜ್ಯದ ಅಭಿವೃದ್ಧಿಗಾಗಿ ಮೋದಿ ಸರಕಾರ ಅಗತ್ಯವಾದ ನೆರವು ನೀಡಲಿದೆ ಎಂದು ಹೇಳಿದ್ದಾರೆ.
 
ಈಗಾಗಲೇ ಮೊದಲ ಹಂತದ ಚುನಾವಣೆ ಮುಕ್ತಾಯಗೊಂಡಿದ್ದು, ಆಕ್ಟೋಬರ್ 16, 28 ಮತ್ತು ನವೆಂಬರ್ 1 ಹಾಗೂ 5 ರಂದು ನಾಲ್ಕು ಹಂತಗಳಲ್ಲಿ ಮತದಾನ ನಡೆಯಲಿದೆ. 
 
ದೇಶದಲ್ಲಿರುವ ಎಲ್ಲಾ ರಾಜ್ಯಗಳನ್ನು ಅಭಿವೃದ್ಧಿಯತ್ತ ಸಾಗಿಸುವುದು ಕೇಂದ್ರ ಸರಕಾರದ ಕರ್ತವ್ಯವಾಗಿದೆ. ಬಿಹಾರ್ ರಾಜ್ಯಕ್ಕೆ 1.25 ಲಕ್ಷ ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜ್‌ನ್ನು ಕೇಂದ್ರ ಸರಕಾರ ಈಗಾಗಲೇ ಘೋಷಿಸಿದೆ. ನಾವು ಸೋಲಲಿ ಅಥವಾ ಗೆಲ್ಲಲಿ, ಬಿಹಾರ್ ರಾಜ್ಯವನ್ನು ಹಿಂದುಳಿಯಲು ಬಿಡುವುದಿಲ್ಲ ಎಂದು ಸಿಂಗ್ ತಿಳಿಸಿದ್ದಾರೆ. 
 
ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಮಾಡದಿರುವ ಕುರಿತಂತೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರತಿಯೊಂದು ರಾಜಕೀಯ ಪಕ್ಷ ಚುನಾವಣೆಯಲ್ಲಿ ರಣತಂತ್ರ ರೂಪಿಸುತ್ತದೆ. ಬಿಜೆಪಿ ರಾಜಕೀಯ ಇತಿಹಾಸದಲ್ಲಿ ಯಾವತ್ತೂ ಸಿಎಂ ಅಭ್ಯರ್ಥಿಯನ್ನು ಘೋಷಿಸಿಲ್ಲ. ಜನತೆಯ ತೀರ್ಪಿನ ನಂತರ ಕೇಂದ್ರದ ಸಂಸದೀಯ ಮಂಡಳಿ ಸಿಎಂ ಅಭ್ಯರ್ಥಿಯ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದರು.
 
ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲನುಭವಿಸಿದ ನಂತರ ಎಚ್ಚರಗೊಂಡ ಬಿಜೆಪಿ, ಬಿಹಾರ್ ಚುನಾವಣೆಯಲ್ಲಿ ಶತಾಯ ಗತಾಯ ಜಯಭೇರಿ ಬಾರಿಸಲು ಅಗತ್ಯವಾದ ಎಲ್ಲಾ ರಣತಂತ್ರಗಳನ್ನು ರೂಪಿಸಿದೆ. ಬಿಹಾರ್ ಚುನಾವಣೆ ಎನ್‌ಡಿಎ ಮೈತ್ರಿಕೂಟಕ್ಕೆ ಸತ್ವ ಪರೀಕ್ಷೆಯಾಗಿ ಹೊರಹೊಮ್ಮಿದೆ.

ವೆಬ್ದುನಿಯಾವನ್ನು ಓದಿ