ದೇವ ಹನುಮಂತನಿಗೂ ನೋಟಿಸ್

ಮಂಗಳವಾರ, 9 ಫೆಬ್ರವರಿ 2016 (12:32 IST)
ಸೀತಾಮಾತೆಯನ್ನು ಕಾಡಿಗೆ ಕಳುಹಿದ ಆರೋಪದ ಮೇಲೆ ಶ್ರೀರಾಮಚಂದ್ರ ಮತ್ತು ಲಕ್ಷ್ಮಣನ ಮೇಲೆ ನ್ಯಾಯಾಲಯದಲ್ಲಿ ಮೊಕದ್ದಮೆಯನ್ನು ದೂಡಿದ್ದ ಪ್ರಕರಣ ನಿಮಗೆ ಗೊತ್ತಿರಬಹುದು. ಆ ಪ್ರಸಂಗ ನಡೆದು 8 ದಿನಗಳಾಗುವಷ್ಟರಲ್ಲಿ ಶ್ರೀರಾಮ ದಾಸ ಹನುಮನಿಗೆ ನೋಟಿಸ್ ಕಳುಹಿಸಿದ ಸುದ್ದಿ ಈಗ ಕೇಳಿ ಬಂದಿದೆ. 

ಲೋಹಿಯಾ ನಗರದಲ್ಲಿ ರಸ್ತೆ ಬದಿ ನಿರ್ಮಿಸಲಾಗಿರುವ ಹನುಮಾನ್ ಮಂದಿರ, ಸಾರ್ವಜನಿಕರ, ವಾಹನ ಸವಾರರ ಓಡಾಡಕ್ಕೆ ತೊಂದರೆಯನ್ನುಂಟು ಮಾಡುತ್ತಿದ್ದು ಇದನ್ನು ಕೆಡವಿ ಹಾಕಲಾಗುವುದು ಎಂದು ಜಿಲ್ಲಾಡಳಿತ ನೋಟಿಸ್ ನೀಡಿದೆ. ಆದರೆ ಈ ನೋಟಿಸ್ ಅನ್ನು ಹನುಮಂತನ ಹೆಸರಿಗೆ ಕಳುಹಿಸಲಾಗಿದೆ.'ನಿಮ್ಮ ದೇವಸ್ಥಾನವನ್ನು ಕೆಡವಿ ಹಾಕಬಾರದು ಅನ್ನುವುದಕ್ಕೆ ಕಾರಣ ನೀಡಿ' ಎಂದು ನೋಟಿಸ್‌‌ನಲ್ಲಿ ಸೂಚಿಸಲಾಗಿದೆ. 
 
ಬಿಹಾರದಲ್ಲಿ ಇತ್ತೀಚಿಗೆ ಅತಿ ಹೆಚ್ಚಾಗಿ ವಿವಾದಕ್ಕೊಳಪಡುತ್ತಿರುವ ದೇವರೆಂದರೆ ಹನುಮಂತ. ಈ ನೋಟಿಸ್ ಬಂದ ಗಂಟೆಗಳೊಳಗೆ ಬಜರಂಗ ದಳದ ಕಾರ್ಯಕರ್ತರು ಮತ್ತು ಬೆಂಬಲಿಗರು ನೋಟಿಸ್‌ನ್ನು ಹಿಂಪಡೆಯುವಂತೆ ರಸ್ತೆ ತಡೆ ನಡೆಸಿ ಪ್ರತಿಭಟಿಸಿದ್ದಾರೆ.
 
ವಿವಾದ ಭುಗಿಲೆಳುತ್ತಿರುವ ಸೂಚನೆ ದೊರೆತ ಕೂಡಲೆ ನೋಟಿಸ್ ರದ್ದುಗೊಳಿಸಿರುವ ಜಿಲ್ಲಾಡಳಿತ ಯಾರು ಆ ನೋಟಿಸ್ ಜಾರಿಗೊಳಿಸಿರುವುದು ಎಂದು ತನಿಖೆ ನಡೆಸುವುದಾಗಿ ಧರಣಿ ನಿರತರಿಗೆ ಭರವಸೆ ನೀಡಿದೆ. 

ವೆಬ್ದುನಿಯಾವನ್ನು ಓದಿ