ಲಲಿತ್ ಮೋದಿ ವಿರುದ್ಧ ದೂರು ಸಲ್ಲಿಸಿದ ರಾಷ್ಟ್ರಪತಿ ಭವನ

ಭಾನುವಾರ, 5 ಜುಲೈ 2015 (16:50 IST)
ಹಲವು ದಿನಗಳಿಂದ ಭಾರತದ ರಾಜಕೀಯದಲ್ಲಿ ಬಿರುಗಾಳಿಯನ್ನು ಎಬ್ಬಿಸಿರುವ ಐಪಿಎಲ್‌ನ ಮಾಜಿ ಮುಖ್ಯಸ್ಥ ಲಲಿತ್ ಮೋದಿ ವಿರುದ್ಧ ರಾಷ್ಟ್ರಪತಿಭವನ ದೆಹಲಿ ಪೊಲೀಸರಿಗೆ ದೂರು ನೀಡಿದೆ. 

ರಾಷ್ಟ್ರಪತಿಗಳ ವಿರುದ್ಧ ಆರೋಪ ಮಾಡಿ ಟ್ವೀಟ್ ಮಾಡುವುದರ ಮೂಲಕ ಲಲಿತ್ ಮೋದಿ ರಾಷ್ಟ್ರಪತಿಗಳಿಗೆ ಅಪಮಾನ ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
 
ಸ್ವತಃ ಹಗರಣದ ಆರೋಪಿಯಾಗಿ ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ಮೋದಿ, "ಕೇಂದ್ರ ಮಾಜಿ ಸಚಿವ ಶಶಿ ತರೂರ್ ಪತ್ನಿ ಸುನಂದಾ ಪುಷ್ಕರ್ ಒಡೆತನದ ಕೊಚ್ಚಿ ಟಸ್ಕರ್ಸ್ ಕೇರಳ ಮಾಲೀಕತ್ವದ ವಿವಾದದಲ್ಲಿ ಅವರ ಪಾತ್ರದ ಬಗ್ಗೆ ನಾನು ಬಹಿರಂಗಪಡಿಸಿದ್ದೆ. ಅದಕ್ಕೆ ಪ್ರತೀಕಾರವಾಗಿ ಆಗ ಹಣಕಾಸು ಸಚಿವರಾಗಿದ್ದ ಪ್ರಣಬ್ ಮುಖರ್ಜಿ ನನ್ನ ವಿರುದ್ಧ ತನಿಖೆಗೆ ಆದೇಶ ನೀಡಿದ್ದರು. ತಾನು ಐಪಿಎಲ್ ಮುಖ್ಯಸ್ಥನಾಗಿದ್ದ ಸಂದರ್ಭದಲ್ಲಿ ತನ್ನ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳನ್ನು ಎತ್ತಿ ಕಟ್ಟುತ್ತಿದ್ದರು", ಎಂದು ರಾಷ್ಟ್ರಪತಿಗಳ ವಿರುದ್ಧ ಆರೋಪ ಮಾಡಿದ್ದರು. 
 
ಅಲ್ಲದೇ ರಾಷ್ಟ್ರಪತಿಯವರ ಸೆಕ್ರೆಟರಿ ಒಮಿತಾ ಪೌಲ್‌ಗೆ ಹವಾಲಾ ಮಧ್ಯವರ್ತಿ ನಾಗ್‌ಪಾಲ್ ಜತೆ ಸಂಪರ್ಕವಿದೆ ಎಂದು ಲಲಿತ್ ಮೋದಿ ಟ್ವೀಟ್ ಮಾಡಿದ್ದರು. ಈ ಆರೋಪವನ್ನು ಖಂಡಿಸಿ ರಾಷ್ಟ್ರಪತಿ ಭವನ ದೂರ ನೀಡಿದೆ. 
 
ಲಲಿತ್ ಮೋದಿ ಟ್ವೀಟ್‌ನ ಪ್ರತಿಯನ್ನೂ ದೂರಿನೊಂದಿಗೆ ಸಲ್ಲಿಸಲಾಗಿದೆ.
 
ದೂರನ್ನು ಸ್ವೀಕರಿಸಿರುವ ಪೊಲೀಸರು ತನಿಖೆಯ ಭರವಸೆ ನೀಡಿದ್ದಾರೆ. ಕೋರ್ಟ್‌ ಸೂಚನೆ ನೀಡಿದರೆ ಲಲಿತ್ ಮೋದಿ ಟ್ವಿಟ್ಟರ್ ಪೇಜ್‌ ಬ್ಲ್ಯಾಕ್ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. 

ವೆಬ್ದುನಿಯಾವನ್ನು ಓದಿ