ರಾಷ್ಟ್ರವಿರೋಧಿ ಚಟುವಟಿಕೆಗಳು ಮುಂದುವರೆದರೆ ಜೆಎನ್‌ಯು ಪದವಿಗಳನ್ನು ಹಿಂತಿರುಗಿಸುತ್ತೇನೆ: ಮಾಜಿ ಸೈನಿಕ

ಶನಿವಾರ, 13 ಫೆಬ್ರವರಿ 2016 (15:23 IST)
2001ರ ಸಂಸತ್ ದಾಳಿಯ ಅಪರಾಧಿ ಅಫ್ಜಲ್ ಗುರು ನೇಣಿಗೆ ಹಾಕಿರುವುದನ್ನು ವಿರೋಧಿಸಿ ವಾರ್ಸಿಟಿ ಕ್ಯಾಂಪಸ್ ತೋರಿದ ರಾಷ್ಟ್ರ ವಿರೋಧಿ ಚಟುವಟಿಕೆಯ ಬಳಿಕ 
ದೆಹಲಿಯ ಪ್ರತಿಷ್ಠಿತ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾನಿಲಯ ರಣರಂಗವಾಗಿ ಮಾರ್ಪಟ್ಟಿದೆ.

ಈಗ ನಿವೃತ್ತ ಸೈನಿಕರು ಸಹ ಈ ಕಲಹಕ್ಕೆ ಧುಮುಕಿದ್ದು  ವಿಶ್ವವಿದ್ಯಾನಿಲಯದ ಆವರಣದಲ್ಲಿ ದೇಶವಿರೋಧಿ ಚಟುವಟಿಕೆಗಳು ಮುಂದುವರೆದರೆ ತಮ್ಮ ಜೆಎನ್‌ಯು ಪದವಿಗಳನ್ನು ಹಿಂತಿರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. 
 
ವಿಶ್ವವಿದ್ಯಾನಿಲಯದ ಉಪಕುಲಪತಿಗೆ ನಿವೃತ್ತ ಸೈನಿಕರೊಬ್ಬರು ಬರೆದ ಪತ್ರ ಹೀಗಿದೆ: "ನಾವು ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ಜೂನ್ 1978 ಬ್ಯಾಚ್‌ನ ಹೆಮ್ಮೆಯ ಸೈನಿಕರಾಗಿದ್ದು, ನಿಮ್ಮ ಗೌರವಾನ್ವಿತ ವಿಶ್ವವಿದ್ಯಾಲಯದಿಂದ ಬಿಎ ಮತ್ತು ಬಿಎಸ್‌ಸಿ ಪದವಿಯನ್ನು ಅಭಿಮಾನದಿಂದ ಸ್ವೀಕರಸಿದ್ದೆವು. ಆದರೆ ನಿಮ್ಮ ಕಾಲೇಜು ಆವರಣದಲ್ಲಿ ಅಫ್ಜಲ್ ಗುರು ಹುಟ್ಟುಹಬ್ಬದಂತಹ ದೇಶ ವಿದ್ರೋಹದ ಚಟುವಟಿಕೆಗಳು ನಡೆಯುತ್ತಿರುವುದಕ್ಕೆ ಇಂದು ಅಪಮಾನಿತರಾಗುತ್ತಿದ್ದೇವೆ. ನಿಮ್ಮ ವಿಶ್ವವಿದ್ಯಾಲಯದಲ್ಲಿ ಇತ್ತೀಚಿಗೆ ನಡೆಯುತ್ತಿರುವ ಚಟುವಟಿಕೆಗಳು ಹಿಂದಿನ ಪದವೀಧರರು ಮಾಡಿರುವ ತ್ಯಾಗ, ಬಲಿದಾನಗಳನ್ನು ಮರೆಮಾಚುತ್ತವೆ ಎಂದು ದೇಶಭಕ್ತ ನಿವೃತ್ತ ಅಧಿಕಾರಿಗಳಾಗಿರುವ ನಮಗನಿಸುತ್ತದೆ. ಈ ರೀತಿಯ ಚಟುವಟಿಕೆಗಳು ಮುಂದುವರೆದಲ್ಲಿ ನಮ್ಮ ಪದವಿಗಳನ್ನು ಹಿಂತಿರುಗಿಸುತ್ತೇವೆ". 
 
ಶುಕ್ರವಾರ ಜೆಎನ್‌ಯು ವಿದ್ಯಾರ್ಥಿಗಳ ಯೂನಿಯನ್ ಅಧ್ಯಕ್ಷ ಕನೈಯ್ಯಾ ಕುಮಾರ್ ಅವರನ್ನು ಬಂಧಿಸಲಾಗಿದ್ದು, ದೇಶದ್ರೋಹದ ಆರೋಪದ ಮೇಲೆ ಮೂರು ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. 

ವೆಬ್ದುನಿಯಾವನ್ನು ಓದಿ