ಟೆಕ್ಕಿಯ ಮೇಲೆ ಅತ್ಯಾಚಾರ ನಡೆಸಿ, ಬೆದರಿಕೆ ಒಡ್ಡಿದ ಫೇಸ್‌ಬುಕ್ ಫ್ರೆಂಡ್

ಮಂಗಳವಾರ, 29 ಜುಲೈ 2014 (17:13 IST)
ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ 23 ವರ್ಷದ ಯುವತಿಯ ಮೇಲೆ ಅತ್ಯಾಚಾರ ನಡೆಸಿ, ತನ್ನ ಕುಕೃತ್ಯದ ವಿಡಿಯೋ ತಯಾರಿಸಿ ಆಕೆಗೆ ಬೆದರಿಕೆ ಒಡ್ಡಿದ ಆರೋಪದ ಮೇಲೆ ಇಂಜಿನಿಯರ್ ವಿದ್ಯಾರ್ಥಿಯೊಬ್ಬನನ್ನು ಬಂಧಿಸಿದ ಘಟನೆ ಇಂದೋರ್‌ನಲ್ಲಿ ವರದಿಯಾಗಿದೆ. 

ಮೂಲತಃ ಗುಜರಾತಿನ ಭಾವನಗರದ ನಿವಾಸಿಯಾದ ಆರೋಪಿ ರಿಶಬ್ ಕಟೋಡಿಯಾ  (25) ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದು, ಪೀಡಿತೆ ನೀಡಿದ ಲಿಖಿತ ದೂರಿನ ಆಧಾರದ ಮೇಲೆ ಆತನನ್ನು ಬಂಧಿಸಲಾಗಿದೆ. ಆತ ತನ್ನ ಮೇಲೆ ಅತ್ಯಾಚಾರ ನಡೆಸಿ, ಕಳೆದ ಹಲವು ತಿಂಗಳಿಂದ ಬೆದರಿಕೆ ಒಡ್ಡುತ್ತಿದ್ದ ಎಂದು ಆಕೆ ತನ್ನ ದೂರಿನಲ್ಲಿ ದಾಖಲಿಸಿದ್ದಾಳೆ ಎಂದು ಸಬ್ ಇನ್ಸಪೆಕ್ಟರ್ ಭನ್ವರ್ ಕೌನ್ ತಿಳಿಸಿದ್ದಾರೆ. 
 
ಪೀಡಿತೆ ಇಂದೋರ್‌ನಲ್ಲಿ ಅಭ್ಯಸಿಸುವಾಗ ಸಾಮಾಜಿಕ ಜಾಲತಾಣದಲ್ಲಿ ಅವರಿಬ್ಬರು ಸ್ನೇಹಿತರಾಗಿದ್ದರು. ಈ ವರ್ಷ ಜನವರಿ ತಿಂಗಳಲ್ಲಿ  ಆರೋಪಿ ಇಂದೋರ್‌ಗೆ ಬಂದಿದ್ದ.  ಆ ಸಮಯದಲ್ಲಿ ಆತನ ಜತೆ ಯುವತಿ ಸುತ್ತಾಡಲು ಹೋಗಿದ್ದಳು.  ಕಾಫಿ ಕುಡಿಯೋಣ ಎಂದ ಆತ, ಆಕೆಗೆ ಅರಿವಿಲ್ಲದೇ ಕಾಫಿಯಲ್ಲಿ ನಿದ್ರಾಜನಕ ಪದಾರ್ಥವನ್ನು ಬೆರಸಿದ. ಕಾಫಿ ಕುಡಿದು ಪ್ರಜ್ಞಾಹೀನಳಾದ ಆಕೆಯ ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸಿಕೊಂಡ. 
 
2 ತಿಂಗಳ ನಂತರ ಆಕೆಗೆ ಕರೆ ಮಾಡಿದ ಆರೋಪಿ, ಆ ವಿಡಿಯೋ ಕ್ಲಿಪ್‌ಗಳನ್ನಿಟ್ಟುಕೊಂಡು  ಬೆದರಿಕೆ ಒಡ್ಡತೊಡಗಿದ. ವಡೋದರಾಕ್ಕೆ ಬರುವಂತೆ ಕರೆದ. ಆತನ ಬೆದರಿಕೆಯಿಂದ, ಭಯಕ್ಕೆ ಸಿಲುಕಿದ ಅವಳು ಆರೋಪಿ ಹೇಳಿದ ಸ್ಥಳಕ್ಕೆ ಹೋದಳು. ಅಲ್ಲಾತ ಆಕೆಯ ಮೇಲೆ  ಮೂರು ದಿನಗಳ ಕಾಲ ಅತ್ಯಾಚಾರ ಎಸಗಿದ ಎಂದು ಪೋಲಿಸರು ತಿಳಿಸಿದ್ದಾರೆ. 
 
ನಂತರ ಮತ್ತೆ ಆಕೆಯ ಅಶ್ಲೀಲ ಪೋಟೋಗಳನ್ನು ಕಳುಹಿಸಿದ ಆತ ತನ್ನನ್ನು ಮದುವೆಯಾಗುವಂತೆ ಒತ್ತಡ ಹೇರತೊಡಗಿದ.  ಆಕೆ ತನ್ನ ಪ್ರಸ್ತಾವವನ್ನು ನಿರಾಕರಿಸಿದ್ದರಿಂದ ಸಿಟ್ಟಿಗೆದ್ದ ರಿಶಬ್  ಆಕೆಯನ್ನು ಕೊಲ್ಲುವುದಾಗಿ ಮತ್ತು ಅಶ್ಲೀಲ ಭಾವಚಿತ್ರಗಳನ್ನು  ಆಕೆಯ ಪಾಲಕರಿಗೆ ತೋರಿಸುವುದಾಗಿ ಬೆದರಿಕೆ ಒಡ್ಡತೊಡಗಿದ. ಆತನ ಉಪಟಳ ತಾಳದಾದಾಗ ನೊಂದ ಯುವತಿ ಪೋಲಿಸರಲ್ಲಿ ದೂರು ದಾಖಲಿಸಿದಳು. 

ವೆಬ್ದುನಿಯಾವನ್ನು ಓದಿ