ಆರು ದಶಕಗಳು ಕಳೆದರೂ ರೈತರಿಗೆ ನಿಜವಾದ ಸ್ವಾತಂತ್ರ್ಯ ದೊರೆತಿಲ್ಲ: ವರುಣ್ ಗಾಂಧಿ ವಿಷಾದ

ಶುಕ್ರವಾರ, 4 ಸೆಪ್ಟಂಬರ್ 2015 (20:23 IST)
ಕೈಗಾರಿಕೋದ್ಯಮಿಗಳು ನೂರಾರು ಕೋಟಿ ರೂಪಾಯಿಗಳ ಸಾಲ ಮರುಪಾವತಿ ಮಾಡಲು ವಿಫಲವಾದರೂ ಕೂಡಾ ಯಾವುದೇ ಶಿಕ್ಷೆಗೊಳಗಾಗುವುದಿಲ್ಲ. ಆದರೆ, ಸಣ್ಣಪುಟ್ಟ ರೈತರು ಅಲ್ಪಮಟ್ಟಿನ ಸಾಲಕ್ಕಾಗಿ ಜೈಲಿಗೆ ಕಳುಹಿಸಲಾಗುತ್ತದೆ ಎಂದು ಬಿಜೆಪಿ ಸಂಸದ ವರುಣ್ ಗಾಂಧಿ ಹೇಳಿದ್ದಾರೆ.
 
ದೇಶಕ್ಕೆ ಸ್ವಾತಂತ್ರ್ಯ ದೊರೆತು ಆರವತ್ತು ವರ್ಷಗಳಾದರೂ ರೈತರಿಗೆ ಇಲ್ಲಿಯವರೆಗೆ ನಿಜವಾದ ಸ್ವಾತಂತ್ರ್ಯ ದೊರೆತಿಲ್ಲ. ಕೆಲವೇ ಸಾವಿರ ರೂಪಾಯಿಗಳ ಸಾಲಕ್ಕೆ ಜೈಲಿಗೆ ತಳ್ಳಲಾಗುತ್ತಿದೆ. ಆದರೆ, ಕೈಗಾರಿಕೋದ್ಯಮಿಗಳು ಕೋಟಿ ಕೋಟಿ ರೂಪಾಯಿಗಳ ಸಾಲ ಬಾಕಿ ಪಾವತಿಸದಿದ್ದರೂ ಶಿಕ್ಷೆಗೊಳಗಾಗದಿರುವುದು ವಿಪರ್ಯಾಸವಾಗಿದೆ ಎಂದು ಕಿಸಾನ್ ಪಂಚಾಯತ್ ಸಭೆಯಲ್ಲಿ ವರುಣ್ ಹೇಳಿದ್ದಾರೆ. 
 
ರೈತರಿಗೆ ಮತ್ತು ಕೈಗಾರಿಕೋದ್ಯಮಿಗಳಿಗಾಗಿ ಪ್ರತ್ಯೇಕ ಕಾನೂನು ಜಾರಿಗೆ ತರುವುದು ಅಗತ್ಯವಾಗಿದೆ. ಒಂದು ವೇಳೆ ರೈತ 50 ಸಾವಿರ ರೂಪಾಯಿ ಸಾಲ ಪಾವತಿಸದಿದ್ರೆ ಆತನ ಆಸ್ತಿಯನ್ನು ಹರಾಜಿಗಿಟ್ಟು ಜೈಲಿಗೆ ಕಳುಹಿಸಲಾಗುತ್ತಿದೆ. ಆದರೆ, ಕೈಗಾರಿಕೋದ್ಯಮಿಗಳನ್ನು ಮುಟ್ಟುವ ಧೈರ್ಯ ಯಾರಿಗೂ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
 
ಏತನ್ಮಧ್ಯೆ, ವರುಣ್ ಗಾಂಧಿಯವರನ್ನು ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಹೈಕಮಾಂಡ್ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಬೇಕು ಎಂದು ಅವರ ಬೆಂಬಲಿಗರು ಘೋಷಿಸಿದರು.
 

ವೆಬ್ದುನಿಯಾವನ್ನು ಓದಿ