ರೈತರದ್ದು ಹಳೆಯ ಸಮಸ್ಯೆಗಳು, ಒಟ್ಟಾಗಿ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ: ಮೋದಿ

ಶನಿವಾರ, 25 ಏಪ್ರಿಲ್ 2015 (16:17 IST)
ಕೃಷಿ ಸಮುದಾಯದ ಸಮಸ್ಯೆಗಳು ತುಂಬಾ ಹಳೆಯದಾಗಿದ್ದು ಆಳವಾಗಿ ಬೇರೂರಿದ್ದಲ್ಲದೇ ವಿಸ್ತಾರವಾಗಿ ಹರಡಿವೆ. ರೈತರ ಸಮಸ್ಯೆಗಳಿಗೆ ಎಲ್ಲರು ಒಂದಾಗಿ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದು ಪ್ರದಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ನಿನ್ನೆ ನಡೆದ ರೈತ ಗಜೇಂದ್ರ ಸಿಂಗ್ ಆತ್ಮಹತ್ಯೆ ಪ್ರಕರಣದ ಕುರಿತಂತೆ ಲೋಕಸಭೆಯ ಸದಸ್ಯರು ಕಳವಳ ವ್ಯಕ್ತಪಡಿಸಿದ ನಂತರ ಮಾತನಾಡಿದ ಅವರು, ರೈತರಿಗೆ ಅಗತ್ಯವಾದ ಅನುಕೂಲತೆಗಳನ್ನು ಮಾಡಿಕೊಡುವುದಲ್ಲದೇ ಆಧುನಿಕ ಕೃಷಿ ಪದ್ದತಿ ಅಳವಡಿಕೆಗೆ ತರಬೇತಿ ನೀಡುವುದು ಅಗತ್ಯವಾಗಿದೆ. ಮುಂಬರುವ ಕೆಲ ವರ್ಷಗಳಲ್ಲಿ ಕೃಷಿಕರಿಗಾಗಿ ಯೋಜನೆ ಸಿದ್ದಪಡಿಸಲಾಗಿದೆ ಎಂದರು.   

ಗಜೇಂದ್ರ ಸಿಂಗ್ ಸಾವಿನ ಘಟನೆ ದೇಶದ ಜನತೆಗೆ, ಸಂಸದರಿಗೆ ಹಾಗೂ ನನಗೂ ನೋವು ತಂದಿದೆ. ಮುಂಬರುವ ದಿನಗಳಲ್ಲಿ ರೈತರಿಗೆ ಹೊಸ ಯೋಜನೆಗಳನ್ನು ಜಾರಿಗೊಳಿಸಲಾಗುವುದು ಎಂದು ಸದನಕ್ಕೆ ಮೋದಿ ಭರವಸೆ ನೀಡಿದರು.

ರೈತನ ಜೀವಕ್ಕಿಂತ ಅಥವಾ ಮಾನವ ಜೀವಕ್ಕಿಂತ ಜಗತ್ತಿನಲ್ಲಿ ಹೆಚ್ಚಿನದೇನು ಇಲ್ಲ. ಇಂತಹ ಹಳೆಯ ಸಮಸ್ಯೆಗಳಿಗೆ ಕಾಯಕಲ್ಪ ಹಾಡಬೇಕಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ