ಸಚಿವರೊಂದಿಗೆ ವಾಗ್ವಾದ: 24 ಗಂಟೆಗಳಲ್ಲಿಯೇ ಎಸ್‌ಪಿ ಸಂಗೀತಾ ಕಾಲಿಯಾ ವರ್ಗಾವಣೆ

ಶನಿವಾರ, 28 ನವೆಂಬರ್ 2015 (16:22 IST)
ಹರಿಯಾಣಾದ ಆರೋಗ್ಯ ಖಾತೆ ಸಚಿವ ಅನಿಲ್ ವಿಜ್ ಅವರೊಂದಿಗೆ ವಾಗ್ವಾದದಲ್ಲಿ ತೊಡಗಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಗೀತಾ ಕಾಲಿಯಾರನ್ನು 24 ಗಂಟೆಗಳಲ್ಲಿಯೇ ವರ್ಗಾಯಿಸಿ ಸರಕಾರ ಆದೇಶ ಹೊರಡಿಸಿದೆ.
ಹರಿಯಾಣಾದ ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟರ್ ಕಚೇರಿಯಿಂದ ಶೀಘ್ರದಲ್ಲಿಯೇ ಅಧಿಕೃತ ಆದೇಶ ಹೊರಬೀಳಲಿದೆ ಎಂದು  ಸಚಿವಾಲಯದ ಮೂಲಗಳು ತಿಳಿಸಿವೆ. 
 
ಆರೋಗ್ಯ ಸಚಿವ ಅನಿಲ್ ವಿಜ್, ನಿನ್ನೆ ಮಹಿಳಾ ಪೊಲೀಸ್ ಅಧಿಕಾರಿಯನ್ನು ಸಭೆಯಿಂದ ಹೊರಹೋಗುವಂತೆ ಆದೇಶಿಸಿದ್ದರು. ಆದರೆ ಅವರ ಹೊರಹೋಗಲು ನಿರಾಕರಿಸಿದಾಗ, ತಾವೇ ಸಭೆಯಿಂದ ಹೊರಬಂದಿದ್ದರು.
 
ಫತೇಹಬಾದ್ ಜಿಲ್ಲೆಯಲ್ಲಿ ಮದ್ಯದ ಅಕ್ರ ಸಾಗಾಣೆ ನಡೆಯುತ್ತಿದೆ ಎನ್ನುವ ವಿಷಯ ಕುರಿತಂತೆ ಪರಸ್ಪರರು ವಾಗ್ವಾದದಲ್ಲಿ ತೊಡಗಿದ್ದರು.
 
ಸಚಿವ ಅನಿಲ್ ವಿಜ್ ಸಭೆಯಿಂದ ಹೊರಬಂದು, ಐಪಿಎಸ್ ಅಧಿಕಾರಿ ಸಂಗೀತಾ ಕಾಲಿಯಾ ಸಭೆಯಿಂದ ಹೊರಹೋಗದಿದ್ದಲ್ಲಿ ನಾನು ಸಭೆಗೆ ಹಾಜರಾಗುವುದಿಲ್ಲ ಎಂದು ಗುಡುಗಿ ಹೊರಟುಹೋಗಿದ್ದರು.
 
ಸಭೆಯಿಂದ ನಾನು ಯಾಕೆ ಹೋಗಬೇಕು? ಎಂದು ಸಚಿವರಿಗೆ ಪ್ರಶ್ನಿಸಿದ ಕಾಲಿಯಾ, ನಾನು ಹೊರಹೋಗುವುದಿಲ್ಲ ಎಂದು ತಿರುಗೇಟು ನೀಡಿದ್ದರು.
 
ಸಾರ್ವಜನಿಕ ವ್ಯವಹಾರಗಳ ಸಮಿತಿಯ ಮುಖ್ಯಸ್ಥರಾದ ಸಚಿವ ವಿಜ್, ಪಂಜಾಬ್ ಗಡಿಗೆ ಹೊಂದಿಕೊಂಡಂತೆ ನಡೆಯುತ್ತಿರುವ ಅಕ್ರಮ ಮದ್ಯ ಸಾಗಾಣಿಕೆ ಕುರಿತಂತೆ ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಗೀತಾ ಕಾಲಿಯಾರನ್ನು ಪ್ರಶ್ನಿಸಿರುವುದು ವಿವಾದಕ್ಕೆ ನಾಂದಿಯಾಯಿತು. 

ವೆಬ್ದುನಿಯಾವನ್ನು ಓದಿ