ಮಾಜಿ ಗೃಹ ಸಚಿವ ಪಿ.ಚಿದಂಬರಂ ವಿರುದ್ಧ ದೇಶದ್ರೋಹದ ಕೇಸ್ ದಾಖಲಿಸಿ: ಶಿವಸೇನಾ

ಮಂಗಳವಾರ, 1 ಮಾರ್ಚ್ 2016 (15:48 IST)
ಇಶ್ರತ್ ಜಹಾನ್ ಮತ್ತು ಆಕೆಯ ಸಹಚರರು ಲಷ್ಕರ್-ಎ-ತೊಯಿಬಾ ಸಂಘಟನೆಗೆ ಸೇರಿದವರು ಎನ್ನುವ ಅಫಿಡವಿಟ್‌‌ನಲ್ಲಿ ಬದಲಾವಣೆ ಮಾಡಿದ ಮಾಜಿ ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ವಿರುದ್ಧ ದೇಶದ್ರೋಹದಡಿ ಕೇಸ್ ದಾಖಲಿಸಬೇಕು ಎಂದು ಶಿವಸೇನೆ ಒತ್ತಾಯಿಸಿದೆ. 
 
ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಉಗ್ರರ ಅಫಿಡವಿಟ್ ಬದಲಿಸಿರುವುದು ದೇಶಕ್ಕೆ ಅಪಾಯ ತರುವಂತಹ ಸಂಗತಿ. ಇಶ್ರತ್ ಜಹಾನ್ ಉಗ್ರ ಸಂಘಟನೆಯಾದ ಎಲ್‌ಇಟಿಯೊಂದಿಗೆ ಸಂಪರ್ಕ ಹೊಂದಿರುವ ಬಗ್ಗೆ ರಹಸ್ಯ ಕಾಪಾಡಲು ಯುಪಿಎ ಸರಕಾರ ಯಾವ ಕಾರಣಕ್ಕೆ ಪ್ರಯತ್ನಿಸಿತು ಎಂದು ಶಿವಸೇನಾ ನಾಯಕ ಸಂಜಯ್ ರಾವುತ್ ಪ್ರಶ್ನಿಸಿದ್ದಾರೆ.  
 
ಚಿದಂಬರಂ ವಿಷಯ ತುಂಬಾ ಗಂಭೀರವಾಗಿದ್ದಲ್ಲದೇ ದೇಶಕ್ಕೆ ಅಪಾಯಕಾರಿ ಕೂಡಾ ಆಗಿದೆ. ಉಗ್ರವಾದಿಯಾಗಿದ್ದ ಇಶ್ರತ್‌ಳನ್ನು ಎನ್‌ಕೌಂಟರ್ ಮಾಡಿದ ಪೊಲೀಸರನ್ನೇ ಆರೋಪಿಗಳನ್ನಾಗಿಸಲಾಯಿತು.ಇದೀಗ ಹೆಡ್ಲಿ ವಿಷಯ ಬಹಿರಂಗಪಡಿಸಿದ ನಂತರ ಸತ್ಯ ಸಂಗತಿ ಹೊರಬಂದಿದೆ. ಯುಪಿಎ ಸರಕಾರ ಯಾಕೆ ವಿಷಯವನ್ನು ಮುಚ್ಚಿಡಲು ಪ್ರಯತ್ನಿಸಿತು. ಯಾರನ್ನು ರಕ್ಷಣೆ ಮಾಡಲು ಪ್ರಯತ್ನಿಸಿತು ಎಂದು ವಾಗ್ದಾಳಿ ನಡೆಸಿದರು.
 
ಸಂಸತ್ ದಾಳಿಯಲ್ಲಿ ಅಫ್ಜಲ್ ಗುರು ಪಾತ್ರದ ಬಗ್ಗೆ ಸಂಶಯವಿದೆ ಎಂದು ಚಿದಂಬರಂ ಹೇಳಿಕೆ ನೀಡಿದ್ದಾರೆ. ಆದ್ದರಿಂದ, ಇಶ್ರತ್ ಜಹಾನ್ ಮತ್ತು ಅಫ್ಜಲ್ ಗುರು ಬೆಂಬಲಿಗರನ್ನು ವಿಚಾರಣೆಗೊಳಪಡಿಸಿ ಅವರ ವಿರುದ್ಧ ದೇಶದ್ರೋಹದ ಕೇಸ್ ದಾಖಲಿಸಿ ಜೈಲಿಗೆ ಕಳುಹಿಸಬೇಕು ಎಂದು ಕೇಂದ್ರ ಸರಕಾರವನ್ನು ಒತ್ತಾಯಿಸಿದರು.
 
ಏತನ್ಮಧ್ಯೆ, ಅಂದಿನ ಗೃಹ ಸಚಿವ ಪಿ.ಚಿದಂಬರಂ ಅಫಿಡವಿಟ್ ಬದಲಿಸಿದ್ದರು ಎಂದು ಮಾಜಿ ಗೃಹ ಸಚಿವಾಲಯದ ಕಾರ್ಯದರ್ಶಿ ಜಿ.ಕೆ.ಪಿಳ್ಳೈ ಹೇಳಿಕೆ ನೀಡಿದ ನಂತರ, ಇಶ್ರತ್ ಜಹಾನ್ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಗೃಹ ಸಚಿವಾಲಯ ಪರಿಶೀಲನೆ ನಡೆಸುತ್ತಿದೆ. 
 
ಮಾಜಿ ಗೃಹ ಕಾರ್ಯದರ್ಶಿ ಜಿ.ಕೆ. ಪಿಳ್ಳೈ, ಪ್ರಕರಣದಿಂದ ತಮ್ಮನ್ನು ತಾವು ಹೊರಗಿಡಲು ಪ್ರಯತ್ನಿಸುತ್ತಿದ್ದಾರೆ ಎಂದು ಮಾಜಿ ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಆರೋಪಿಸಿದ್ದಾರೆ.

ವೆಬ್ದುನಿಯಾವನ್ನು ಓದಿ