ಜಯಲಲಿತಾ ಅನಾರೋಗ್ಯ: ವದಂತಿ ಹಬ್ಬಿಸಿದ ಮಹಿಳೆ ವಿರುದ್ಧ ಕೇಸ್ ದಾಖಲು

ಶನಿವಾರ, 1 ಅಕ್ಟೋಬರ್ 2016 (12:44 IST)
ಎಐಡಿಎಂಕೆ ನಾಯಕಿ, ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಅನಾರೋಗ್ಯದ ಬಗ್ಗೆ ವದಂತಿ ಹಬ್ಬಿಸಿದ ಫ್ರಾನ್ಸ್ ನಿವಾಸಿಯಾಗಿರುವ  ಆನಿವಾಸಿ ಭಾರತೀಯ ಮಹಿಳೆ ತಮಿಳಚಿ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ. ಪಕ್ಷದ ಐಟಿ ವಿಂಗ್ ಶುಕ್ರವಾರ ಇದನ್ನು ಖಚಿತ ಪಡಿಸಿದೆ.

ತಮಿಳಚಿ ಜಯಾ ಎರಡು ದಿನಗಳ ಹಿಂದೆ ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ನನಗೆ ಲಭಿಸಿದೆ ಎಂದು ಫೇಸ್‌ಬುಕ್ ಸ್ಟೇಟಸ್ ಹಾಕಿದ್ದರು.

 
ಜಯಲಲಿತಾ ಕಳೆದ ಸೆಪ್ಟೆಂಬರ್ 22 ರಂದು ನಿರ್ಜಲೀಕರಣ ಮತ್ತು ಜ್ವರದ ಬಾಧೆಗೊಳಗಾಗಿ ಚೆನ್ನೈನಲ್ಲಿರುವ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಆರೋಗ್ಯದಲ್ಲಿ ಸುಧಾರಣೆಯಾಗಿದ್ದು, ಕೆಲವು ದಿನಗಳ ಮಟ್ಟಿಗೆ ಅವರನ್ನು ನಿಗಾವಣೆಯಲ್ಲಿ ಇಡಲಾಗುವುದು ಎಂದು ಆಸ್ಪತ್ರೆ ಸೆಪ್ಟೆಂಬರ್ 23 ರಂದು ಪತ್ರಿಕಾ ಹೇಳಿಕೆಯನ್ನು ನೀಡಿತ್ತು. ಆದರೆ ಅವರ ಆರೋಗ್ಯದ ಕುರಿತಾದ ಯಾವುದೇ ನಂಬಲರ್ಹ ವರದಿಯನ್ನು ಇನ್ನೂ ಬಿಡುಗಡೆ ಮಾಡಲಾಗಿಲ್ಲ.
 
ಆಸ್ಪತ್ರೆ ಅವರ ಆರೋಗ್ಯದ ಕುರಿತಾಗಿ ನಿಯತಕಾಲಿಕವಾಗಿ ಯಾವುದೇ ಸ್ಪಷ್ಟತೆ ಇಲ್ಲದ ಸಾಮಾನ್ಯ ಹೇಳಿಕೆಗಳನ್ನು ನೀಡುತ್ತ ಬಂದಿದೆ. ಅದು ವದಂತಿಗಳಿಗೆ ದಾರಿ ಮಾಡಿಕೊಟ್ಟಿದೆ.
 
ಅವರು ಅತಿಯಾದ ಮಧುಮೇಹ ಮತ್ತು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಸಿಂಗಾಪುರಕ್ಕೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಮೊದಲು ವದಂತಿ ಹರಡಿತ್ತು. ಅವರು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾರೆ ಎಂದು ಸುದ್ದಿ ಹಬ್ಬಿತು. ಬಳಿಕ ಅವರು ಕೋಮಾ ಸ್ಥಿತಿಗೆ ತಲುಪಿದ್ದಾರೆ. ಚೇತರಿಸಿಕೊಳ್ಳುವ ಸಾಧ್ಯತೆಗಳೇ ಇಲ್ಲ ಎಂಬ ವದಂತಿ ಹಬ್ಬಿತು.
 
ಆದರೆ ಈ ವದಂತಿಗಳನ್ನು ತಳ್ಳಿ ಹಾಕುತ್ತಲೇ ಬಂದಿರುವ ಆಸ್ಪತ್ರೆ ಮೂಲಗಳು ಅವರ ಆರೋಗ್ಯ ಸ್ಥಿರವಾಗಿದೆ. ಸದ್ಯದಲ್ಲೇ ಬಿಡುಗಡೆಯಾಗಲಿದ್ದಾರೆ ಎಂದು ಹೇಳುತ್ತ ಬಂದಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 

ವೆಬ್ದುನಿಯಾವನ್ನು ಓದಿ