ಪಶುಪತಿನಾಥ ಎಕ್ಸಪ್ರೆಸ್ : ಪ್ರಥಮ ಬಾರಿಗೆ ಭಾರತ- ನೇಪಾಳ ಬಸ್ ಸೇವೆ ಆರಂಭ

ಬುಧವಾರ, 26 ನವೆಂಬರ್ 2014 (17:10 IST)
ಎರಡು ದೇಶಗಳ ಇತಿಹಾಸದಲ್ಲಿ ಪ್ರಥಮ ಬಾರಿಗೆ ಭಾರತ ಮತ್ತು ನೇಪಾಳದ ನಡುವೆ ಬಸ್ ಸೇವೆ ಆರಂಭಗೊಂಡಿದೆ. ಪ್ರತಿದಿನ ಈ ಬಸ್‌ಗಳು ದೆಹಲಿ ಮತ್ತು ಕಠ್ಮಂಡುಗಳ ನಡುವೆ ಸಂಚರಿಸಲಿವೆ. ಕೆಲ ದಿನಗಳ ನಂತರ  ದೆಹಲಿ - ಪೋಕ್ರಾ ಮತ್ತು ವಾರಣಾಸಿ ಮತ್ತು ಕಠ್ಮಂಡು ನಡುವೆ ಕೂಡ ಬಸ್‌ಗಳು ಓಡಾಡಲಿವೆ. 

ಪ್ರಧಾನಿ ನರೇಂದ್ರ ಮೋದಿ ಮತ್ತು ನೇಪಾಳದ ಪ್ರಧಾನಿ ಸುಶೀಲ್ ಕೊಯಿರಾಲಾ ಮಂಗಳವಾರ ಮಧ್ಯಾಹ್ನ ಕಠ್ಮಂಡುವಿನಲ್ಲಿ ಪಶುಪತಿನಾಥ ಎಕ್ಸಪ್ರೆಸ್ ಎಂಬ ಹೆಸರಿನ ಕಠ್ಮಂಡು - ದೆಹಲಿ  ಮಹಾನಗರಗಳ ನಡುವಿನ ಬಸ್ ಸಂಚಾರಕ್ಕೆ ಚಾಲನೆ ನೀಡಿದರು. ದೆಹಲಿಯಿಂದ ರಸ್ತೆ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಮತ್ತು  ಪ್ರವಾಸೋದ್ಯಮ ಸಚಿವ ಮಹೇಶ್ ಶರ್ಮಾ ಕೂಡ ಎರಡು ದೇಶಗಳ ನಡುವಿನ ಬಸ್ ಸಂಚಾರಕ್ಕೆ ಆರಂಭ ನೀಡಿದರು.
 
ಬಸ್ ಸೇವೆ ಪ್ರಾರಂಭಿಸುವ ಮೊದಲು, ಉಭಯ ಪ್ರಧಾನಿಗಳು ಪ್ರಯಾಣಿಕರ ಜತೆ ಉಭಯ ಕುಶಲೋಪರಿ ನಡೆಸಿದರು. ಆಕಾಶಬುಟ್ಟಿಗಳು ಮತ್ತು ಹೂಗಳಿಂದ ಬಸ್‌ನ್ನು ಅಲಂಕರಿಸಲಾಗಿತ್ತು. ದೆಹಲಿಯಲ್ಲಿ, ಸೀಮಾ ಸುರಕ್ಷಾ ಬಲದ 3 ಜನ ಸಿಬ್ಬಂದಿ (ಎಸ್ಎಸ್‌ಬಿ) ಮತ್ತು 14 ಪ್ರಯಾಣಿಕರು ಬಸ್ ಅಂಬೇಡ್ಕರ್ ಕ್ರೀಡಾಂಗಣದ ಬಳಿ ಇರುವ ಬಸ್ ನಿಲ್ದಾಣದಿಂದ ಪ್ರಯಾಣವನ್ನು ಪ್ರಾರಂಭಿಸಿದರು.
 
ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿರುವ ದೆಹಲಿ ಸಾರಿಗೆ ಸಂಸ್ಥೆಯ (DTC) ಅಧಿಕಾರಿಗಳು ಪ್ರಯಾಣದ ಸಮಯ 30 ಗಂಟೆಯದಾಗಿದ್ದು, ಮಾರ್ಗ ಮಧ್ಯೆ ನಾಲ್ಕು ನಿಲ್ದಾಣಗಳಲ್ಲಿ ನಿಲುಗಡೆಯನ್ನು ಮಾಡಲಾಗುವುದು. ದೆಹಲಿಯಿಂದ ಪ್ರಯಾಣ ಆರಂಭಸುವ ಬಸ್ ಲಖನೌ( ವಯಾ ಯಮುನಾ ಎಕ್ಸಪ್ರೆಸ್ ವೇ)- ಗೋರಕ್ಪುರ್- ಸನೌಲಿ-ಭೈರಹವಾ ಮೂಲಕ ಹಾದು ಕಠ್ಮಂಡುವಿನ ಸ್ವಯಂಭು ಟರ್ಮಿನಲ್ ತಲುಪಲಿದೆ ಎಂದು ಹೇಳಿದ್ದಾರೆ.  

ವೆಬ್ದುನಿಯಾವನ್ನು ಓದಿ