ಪಂಚರಾಜ್ಯಗಳ ಮತದಾನ ಸಂಪೂರ್ಣ

ಗುರುವಾರ, 9 ಮಾರ್ಚ್ 2017 (07:37 IST)
ಐದು ರಾಜ್ಯಗಳ ವಿಧಾನಸಭೆಗಳಿಗೆ ನಡೆದ ಬಹುಹಂತದ ಮತದಾನ ಬುಧವಾರ ಕೊನೆಗೊಂಡಿದೆ. ಮಾರ್ಚ್ 11 ಶನಿವಾರ ಫಲಿತಾಂಶ ಹೊರಬೀಳಲಿದೆ.
ಬುಧವಾರ ಉತ್ತರಪ್ರದೇಶದಲ್ಲಿ ಏಳನೇ ಹಂತದ ಮತ್ತು ಮಣಿಪುರದಲ್ಲಿ ಎರಡನೆ ಹಂತದ ಮತದಾನ ನಡೆಯಿತು.  ರಾಷ್ಟ್ರದ ದೊಡ್ಡ ರಾಜ್ಯವೆನಿಸಿಕೊಂಡಿರುವ ಉತ್ತರ ಪ್ರದೇಶದಲ್ಲಿ ನಿನ್ನೆ 60% ಮತದಾನವಾಗಿದ್ದರೆ,ಮಣಿಪುರದಲ್ಲಿ 86% ರಷ್ಟು ಜನ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.
 
ಗೋವಾ ರಾಜ್ಯದಲ್ಲಿ ಫೆಬ್ರುವರಿ 4 ರಂದು ಒಂದೇ ಹಂತದಲ್ಲಿ ಒಟ್ಟು 40 ವಿಧಾನಸಭಾ ಕ್ಷೇತ್ರಗಳಿಗೆ, 117 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಪಂಜಾಬ್‌ ರಾಜ್ಯದಲ್ಲಿ ಫೆಬ್ರುವರಿ 4 ರಂದು, 71 ವಿಧಾನಸಭಾ ಸ್ಥಾನಗಳನ್ನು ಹೊಂದಿರುವ ಉತ್ತರಾಖಂಡ ರಾಜ್ಯದಲ್ಲಿ ಫೆಬ್ರುವರಿ 15 ರಂದು ಒಂದೇ ಹಂತದಲ್ಲಿ ಚುನಾವಣೆ ನಡೆದಿತ್ತು.
 
ಈಶಾನ್ಯ ಭಾರತದ ಮಣಿಪುರ ರಾಜ್ಯದಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಡೆದಿತ್ತು. ಮಣಿಪುರದ ಒಟ್ಟು 60 ವಿಧಾನಸಭಾ ಕ್ಷೇತ್ರಗಳಿಗೆ ಮಾರ್ಚ್ 4 ಹಾಗೂ ಮಾರ್ಚ್ 8ರಂದು  ಮತದಾನ ನಡೆದಿತ್ತು.
 
ದೇಶದ ದೊಡ್ಡ ರಾಜ್ಯ ಉತ್ತರಪ್ರದೇಶದಲ್ಲಿ ಏಳು ಹಂತಗಳಲ್ಲಿ ಮತದಾನ ನಡೆದಿತ್ತು. ಫೆಬ್ರುವರಿ 11ರಿಂದ ಮಾರ್ಚ್‌ 8ರ ವರೆಗೆ 403 ಸ್ಥಾನಗಳಿಗೆ ಚುನಾವಣೆ ನಡೆದಿದೆ.
 

ವೆಬ್ದುನಿಯಾವನ್ನು ಓದಿ