ಸೇನಾ ಮುಖ್ಯಸ್ಥನಾದ ಸಾಮಾನ್ಯ ಸೈನಿಕನ ಮಗ

ಸೋಮವಾರ, 28 ಜುಲೈ 2014 (11:23 IST)
ಸೈನಿಕನಾಗಿ ಸೇವೆಗೆ ಸೇರಿ, ಮೇಲ್ದರ್ಜೆಗೇರದೆ ಸೈನಿಕರಾಗಿಯೇ ನಿವೃತ್ತರಾದ ದೇಶಭಕ್ತ ಸೈನಿಕನೊಬ್ಬ  ಒಂದು ಕನಸು ಕಂಡ. ಸೈನ್ಯದಲ್ಲಿ ತನ್ನ ಮಗನಾದರೂ  ದೊಡ್ಡ ಅಧಿಕಾರಿಯಾಗಬೇಕೆಂಬುದು ಆತನ ದೊಡ್ಡ ಕನಸಾಗಿತ್ತು.  ಮಗ ತಂದೆಯ ಆಶೆಗೆ ತಣ್ಣೀರೆರೆಚಲಿಲ್ಲ. ಆತ ಸೈನ್ಯದಲ್ಲಿ ಉನ್ನತ ಅಧಿಕಾರಿಯಾದನಷ್ಟೇ ಅಲ್ಲದೇ ಈಗ ಭಾರತೀಯ ಸೇನೆಯ ಮುಖ್ಯಸ್ಥನಾಗ ಹೊರಟಿದ್ದಾನೆ. ಅಪ್ಪನ  ಕಣ್ಣಲ್ಲಿ ಹೆಮ್ಮೆಯ ಮಿಂಚು. 

ಜುಲೈ 31ರಂದು ಆ ದೇಶಭಕ್ತ ಸೈನಿಕನ ಮಗ ಲೆಫ್ಟಿನೆಂಟ್ ಜನರಲ್ ದಲ್ಬೀರ್ ಸಿಂಗ್ ಸುಹಾಗ್ ಸೇನಾ ಮುಖ್ಯಸ್ಥ ಅಧಿಕಾರ ಸ್ವೀಕಾರಿಸಲಿದ್ದಾರೆ.
 
''ನಮ್ಮದು ಸೈನಿಕ  ಪರಿವಾರ. ಸೇನೆಯಲ್ಲಿ ನಾನು ಸಾಮಾನ್ಯ ಸೈನಿಕನಾಗಿದ್ದೆ. ನಮ್ಮ ಎರಡು ಪೀಳಿಗೆ ಸೈನ್ಯದಲ್ಲಿ ಕೆಳದರ್ಜೆಯಲ್ಲೇ ಅಂದರೆ ಕೇವಲ ಯೋಧರಾಗಿಯೇ ದುಡಿಯಿತು. ನನ್ನ ಮಕ್ಕಳಾದರೂ ಉನ್ನತ ದರ್ಜೆಗೇರಬೇಕೆಂದು ನಾನು ಬಯಸಿದ್ದೆ.  ದಲ್ಬೀರ್ ಸೇನೆಯ ಉನ್ನತ ದರ್ಜೆಯ ಅಧಿಕಾರಿಯಾಗಬೇಕು ಎಂಬುದು ನನ್ನ ಹಂಬಲವಾಗಿತ್ತು'' ಎನ್ನುತ್ತಾರೆ 18 ಕ್ಯಾವಲ್ರಿ ರೆಜಿಮೆಂಟ್‌ನಲ್ಲಿ ಸುಬೇದಾರ್ ಮೇಜರ್ ಆಗಿದ್ದ ರಾಮ್‌ಪಾಲ್ ಸುಹಾಗ್  (84) .
 
''ದಲ್ಬೀರ್, ಝಾಜ್ಜರ್ ಗ್ರಾಮದ ಶಾಲೆಯ 4ನೇ ತರಗತಿಯಲ್ಲಿ ಓದುತ್ತಿದ್ದಾಗ, ನಾನಾತನನ್ನು ರಾಜಸ್ಥಾನದ ಚಿತ್ತೂರ್‌ಗಢದ ಸೈನಿಕ್ ಶಾಲೆಗೆ ಸೇರಿಸಿದೆ. ಅಲ್ಲಿ ಉತ್ತಮ ಸಾಧನೆ ತೋರಿ, ತನ್ನ ಪರಿಶ್ರಮದ ಫಲವಾಗಿ 1970 ರಲ್ಲಿ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯಲ್ಲಿ ಆತ ಸ್ಥಾನ ಗಿಟ್ಟಿಸಿದ'' ಎಂದು ತಮ್ಮ ಹಳೆಯ ನೆನಪುಗಳ ಕಂತೆಯನ್ನು ಬಿಚ್ಚಿಡುತ್ತಾರೆ 84 ರ ತಾತ. 
 
ಅವರ ಚಿಕ್ಕ ಮಗ ಧರ್ಮಬೀರ್ ಸುಹಾಗ್ ಮತ್ತು ಅಳಿಯಂದಿರಿಬ್ಬರು ಕೂಡ ಸೇನೆಯಲ್ಲಿ ಉನ್ನತ ದರ್ಜೆಯ ಅಧಿಕಾರಿಗಳಾಗಿದ್ದಾರೆ. 
 
ಮಗ ದಲ್ಬೀರ್‌ನ ಸಾಧನೆಗೆ ಅತೀವ ಆನಂದ ವ್ಯಕ್ತಪಡಿಸುತ್ತ ಹೆತ್ತ ತಾಯಿ ಇಶ್ರೀ ದೇವಿ ಮಗನ ಬಾಲ್ಯದ ದಿನಗಳ ನೆನಪಿಗೆ ಜಾರುತ್ತಾರೆ. "ದಲ್ಬೀರ್‌ಗೆ ದೇಶಿ ತುಪ್ಪದಿಂದ ತಯಾರಿಸಿದ ಚುರ್ಮಾ ಮತ್ತು ಹಾಲಿನ ಉತ್ಪನ್ನಗಳೆಂದರೆ ಪಂಚ ಪ್ರಾಣ.ಹಾಗಾಗಿ  ಹಾಲು ಕೊಡುವ ಎಮ್ಮೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಾಕಿಕೊಂಡಿದ್ದೆವು. ಇತ್ತೀಚಿನ ದಿನಗಳವರೆಗೂ ದಲ್ಬೀರ್‌ಗೆ ಚುರ್ಮಾ ಮಾಡಿ ಕಳುಹಿಸುತ್ತಿದ್ದೆ" ಎನ್ನುತ್ತಾರೆ ಗ್ರೇಟ್ ಮಗನ ಅಮ್ಮ. 
 
ಯುವ ಅಧಿಕಾರಿಗಳಂತೆ ಈಗಲೂ ದಲ್ಬೀರ್ ಅವರು  ಫಿಟನೆಸ್ ಕಾಯ್ದುಕೊಂಡಿರುವ ಬಗ್ಗೆ ಪ್ರಶ್ನೆ ಕೇಳಿದಾಗ ಉತ್ತರಿಸಿದ ರಾಮ್ ಅತಿಯಾಗಿ ಹಾಲು ಕುಡಿಯುತ್ತಿದ್ದರಿಂದ ಆತ ದೃಢಕಾಯನಾದ ಎನ್ನುತ್ತಾರೆ.
 
ಮೂಲಗಳ ಪ್ರಕಾರ ಫಿಟನೆಸ್ ಬಗ್ಗೆ ಅತೀವ ಕಾಳಜಿ ಹೊಂದಿರುವ ಭಾವೀ ಸೇನಾ ನಾಯಕ ಈಗಲೂ ದಿನಕ್ಕೆ 10 ಕೀಮೀ  ನಡೆಯುತ್ತಾರಂತೆ. 

ವೆಬ್ದುನಿಯಾವನ್ನು ಓದಿ