ಸೋನಿಯಾ, ರಾಹುಲ್‌ರನ್ನು ಟೀಕಿಸುತ್ತಿದ್ರೆ, ಜಿಎಸ್‌ಟಿ ಮಸೂದೆಯನ್ನು ಮರೆತುಬಿಡಿ: ಮನಮೋಹನ್ ಸಿಂಗ್

ಶನಿವಾರ, 13 ಫೆಬ್ರವರಿ 2016 (17:19 IST)
ಒಂದು ವೇಳೆ, ನೀವು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿಯವರನ್ನು ಗುರಿಯಾಗಿಸಿ ಟೀಕಿಸುತ್ತಿದ್ದಲ್ಲಿ ಜಿಎಸ್‌ಟಿ ಮಸೂದೆಗೆ ಅಂಗೀಕಾರ ದೊರೆಯುವುದನ್ನು ಮರೆತುಬಿಡಿ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
 
ಕೇಂದ್ರ ಸರಕಾರ, ಜಿಎಸ್‌ಟಿ ಮಸೂದೆಗೆ ಅಡ್ಡಿಯಾಗಿರುವ ಕಾಂಗ್ರೆಸ್ ಪಕ್ಷದ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚರ್ಚೆಯ ಮೂಲಕ ಒಮ್ಮತದ ನಿರ್ಧಾರ ತೆಗೆದುಕೊಳ್ಳುವ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
 
ಸತತ ಎರಡು ಬಾರಿ ಸಮ್ಮಿಶ್ರ ಸರಕಾರದಲ್ಲಿ ಪ್ರಧಾನಿಯಾಗಿದ್ದ ಸಿಂಗ್ ಮಾತನಾಡಿ, ದೇಶದ ಜನತೆ ಎನ್‌ಡಿಎ ಸರಕಾರವನ್ನು ನಂಬುವುದಿಲ್ಲ. ಪ್ರಧಾನಿ ಮೋದಿಯೊಂದಿಗೆ ಒಂದು ಅಥವಾ ಎರಡು ಬಾರಿ ಮಾತನಾಡಿರಬಹುದು ಎಂದು ತಿಳಿಸಿದರು.
 
ಒಂದೆರಡು ಬಾರಿ ಭೇಟಿಯಾದಾಗ ವಿಪಕ್ಷಗಳನ್ನು ಎಂದಿಗಿಂತ ಹೆಚ್ಚಿನ ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸುವಂತೆ ಸಲಹೆ ನೀಡಿದ್ದೇನೆ. ಕೇಂದ್ರ ಸರಕಾರ, ಪ್ರಮುಖ ವಿಪಕ್ಷವಾದ ಕಾಂಗ್ರೆಸ್‌ನೊಂದಿಗೆ ವಿದೇಶಿ ಅಥವಾ ದೇಶಿ ನೀತಿಯಾಗಲಿ ಮತ್ತು ಜಿಎಸ್‌ಟಿ ಮಸೂದೆಯಾಗಲಿ, ಯಾವುದೇ ವಿಷಯದ ಬಗ್ಗೆ ಗಂಭೀರವಾಗಿ ಚರ್ಚಿಸುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
 
ಕಳೆದ 2011 ರಿಂದ ಸಂಸತ್ತಿನಲ್ಲಿ ನೆನೆಗುದಿಯಲ್ಲಿರುವ ಜಿಎಸ್‌ಟಿ ಮಸೂದೆಯನ್ನು ಮುಂಬರುವ ಬಜೆಟ್ ಅಧಿವೇಶನದಲ್ಲಿ ಅಂಗೀಕಾರ ದೊರೆಯಲಿದೆ ಎಂದು ಕೇಂದ್ರ ಸರಕಾರ ಹೇಳುತ್ತಿದೆ. ಆದರೆ, ಇವತ್ತಿನವರೆಗೂ ಕಾಂಗ್ರೆಸ್ ಪಕ್ಷದೊಂದಿಗೆ ಜಿಎಸ್‌ಟಿ ಮಸೂದೆಯ ಬಗ್ಗೆ ಗಂಭೀರವಾಗಿ ಚರ್ಚಿಸಿಲ್ಲ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಆರೋಪಿಸಿದ್ದಾರೆ.

ವೆಬ್ದುನಿಯಾವನ್ನು ಓದಿ