ಉದ್ಯೋಗ ನೇಮಕಾತಿ ಹಗರಣ: ಮಾಜಿ ಸಭಾಪತಿಯ ಬಂಧನ

ಶುಕ್ರವಾರ, 4 ಸೆಪ್ಟಂಬರ್ 2015 (15:50 IST)
ವಿಧಾನ ಸಭೆ ಕಾರ್ಯಾಲಯದಲ್ಲಿ ನಡೆದ ಉದ್ಯೋಗ ನೇಮಕಾತಿ ಹಗರಣದಲ್ಲಿ ಭಾಗಿಯಾದ ಆರೋಪದ ಮೇಲೆ ಮಾಜಿ ಸಭಾಪತಿ ಶ್ರೀನಿವಾಸ್ ತಿವಾರಿಯವರನ್ನು ಪೊಲೀಸರು ಬಂಧಿಸಿದ್ದಾರೆ. 
 
ಮಾಜಿ ಸಭಾಪತಿ ಶ್ರೀನಿವಾಸ್ ತಿವಾರಿಯವರನ್ನು ರೇವಾದಲ್ಲಿರುವ ಅವರ ನಿವಾಸದಲ್ಲಿ ಬಂಧಿಸಲಾಗಿತ್ತು, ಆದರೆ, ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಅವರಿಗೆ ಜಾಮೀನು ನೀಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಛಾಧಿಕಾರಿ ಸಲೀಮ್ ಖಾನ್ ತಿಳಿಸಿದ್ದಾರೆ.
 
ಕಳೆದ 1993 ರಿಂದ 2003ರವರೆಗೆ ನಡೆದ ಉದ್ಯೋಗ ನೇಮಕಾತಿ ಹಗರಣದಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಸೇರಿದಂತೆ ಇತರೆ 14 ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
 
20 ವರ್ಷಗಳ ಹಳೆಯದಾದ ಪ್ರಕರಣದಲ್ಲಿ 90 ವರ್ಷ ವಯಸ್ಸಿನ ಮಾಜಿ ಸಭಾಪತಿಯವರನ್ನು ಬಂಧಿಸುವಲ್ಲಿ ಯಾಕೆ ಸರಕಾರ ಆತುರ ತೋರುತ್ತಿದೆ ಎಂದು ಕಿಡಿಕಾರಿದ ಸುಪ್ರೀಂಕೋರ್ಟ್, ಮಾಜಿ ಸಭಾಪತಿಗೆ ಜಾಮೀನು ನೀಡಿ ಆದೇಶ ಹೊರಡಿಸಿದೆ.
 
ಜಿಲ್ಲಾ ಸೆಶನ್ಸ್ ನ್ಯಾಯಾಲಯ ಮತ್ತು ಹೈಕೋರ್ಟ್ ಜಾಮೀನು ಅರ್ಜಿ ತಿರಸ್ಕರಿಸಿದ ಹಿನ್ನೆಲೆಯಲ್ಲಿ ಮಾಜಿ ಸಭಾಪತಿ ತಿವಾರಿ , ಸುಪ್ರೀಂಕೋರ್ಟ್ ಮೊರೆಹೋಗಿದ್ದರು, ಇದೀಗ ಸುಪ್ರೀಂಕೋರ್ಟ್ ಜಾಮೀನು ಮಂಜೂರು ಮಾಡಿದೆ.
 
ವ್ಯಾಪಂ ಹಗರಣದಲ್ಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಮತ್ತು ಅವರ ಕುಟುಂಬದ ಸದಸ್ಯರು ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ನಡೆಸುತ್ತಿದ್ದ ಪ್ರತಿಭಟನೆ ಮಧ್ಯಪ್ರದೇಶ ಮತ್ತು ದೆಹಲಿಯಲ್ಲಿ ಭಾರಿ ಕೋಲಾಹಲ ಉಂಟು ಮಾಡಿತ್ತು.

ವೆಬ್ದುನಿಯಾವನ್ನು ಓದಿ