ರಾಹುಲ್‌ಗೆ ಗಂಭೀರತೆಯಿಲ್ಲ, ಆದ್ರೆ ಮೋದಿಗೆ ಗಂಭೀರತೆಯಿದೆ ಎಂದ ಕಾಂಗ್ರೆಸ್ ಮುಖಂಡ

ಸೋಮವಾರ, 20 ಅಕ್ಟೋಬರ್ 2014 (18:05 IST)
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಗಂಭೀರತೆ ಇಲ್ಲ. ಆದರೆ ಆತ ಸಮರ್ಥ ನಾಯಕ ಎಂದು ಮಾಜಿ ಸಂಸದ ಹೆಚ್. ವಿಶ್ವನಾಥ್ ಅವರು ಸೋಮವಾರ ಹೇಳಿದ್ದಾರೆ.
 
ಇಂದು ಮಡಿಕೇರಿಯಲ್ಲಿ ಮಾತನಾಡಿದ ಹೆಚ್. ವಿಶ್ವನಾಥ್ ಅವರು, ರಾಹುಲ್ ಗಾಂಧಿಗೆ ಪಕ್ಷವನ್ನು ಸಮರ್ಥವಾಗಿ ನಿಭಾಯಿಸುವ ಸಾಮಥ್ಯವಿದೆ. ಆದರೆ ಗಂಭೀರತೆ ಇಲ್ಲ. ಆದರೆ ಪ್ರಧಾನಿ ಮೋದಿ ಅವರಿಗೆ ಸಾಮಥ್ಯಕ್ಕಿಂತ ಗಂಭೀರತೆ ಹೆಚ್ಚಿದೆ ಎಂದರು.
 
ಮಹಾರಾಷ್ಟ್ರ ಹಾಗೂ ಹರಿಯಾಣ ಸೋಲಿನ ನಂತರ ಕಾರ್ಯಕರ್ತರಲ್ಲಿ ಪ್ರಿಯಾಂಕ ಗಾಂಧಿ ಅವರನ್ನು ಸಕ್ರಿಯ ರಾಜಕಾರಣಕ್ಕೆ ಕರೆ ತನ್ನಿ ಎಂಬ ಕೂಗು ಹೆಚ್ಚುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಕಳೆದ ಲೋಕಸಭಾ ಚುನಾವಣೆಯ ಸೋಲಿನ ನಂತರ ಪಕ್ಷಕ್ಕೆ ನಾನು ಹಲವು ಸಲ ಪ್ರಿಯಾಂಕ ಗಾಂಧಿ ಅವರನ್ನು ಸಕ್ರಿಯವಾಗಿ ರಾಜಕಾರಣಕ್ಕೆ ತನ್ನಿ ಎಂದು ಹೇಳಿದ್ದೆ ಆದರೆ ಪಕ್ಷ ಈ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ ಎಂದರು.
 
ಇದೇ ವೇಳೆ, ಮಹಾರಾಷ್ಟ್ರ ಹಾಗೂ ಹರಿಯಾಣದಲ್ಲಿ ಮತದಾರರು ಬಿಜೆಪಿಗೆ ಜೈ ಎಂದಿದ್ದು, ಇದು ಮೋದಿ ಅಲೆಯಿಂದಲ್ಲ. ಆಡಳಿತ ವೈಫಲ್ಯದಿಂದಾಗಿ ಮತದಾರರು ಬಿಜೆಪಿಗೆ ಮತ ಹಾಕಿದ್ದಾರೆ ಎಂದರು. ಕಳೆದ ಲೋಕಸಭಾ ಚುನಾವಣೆ ನರೇಂದ್ರ ಮೋದಿ ಅವರ ಅಲೆ ಇತ್ತು ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ ಆದರೆ ಅದೇ ಅಲೆ ಮಹಾರಾಷ್ಟ್ರ ಹಾಗೂ ಹರಿಯಾಣದಲ್ಲಿ ಇಲ್ಲ. ಆದರೆ ಬಿಜೆಪಿ ನಾಯಕರು ಎರಡು ವಿಧಾಸನಭೆ ಚುನಾವಣೆಯಲ್ಲೂ ಮೋದಿ ಅಲೆಯಿಂದಲೇ ಗೆಲವು ಸಾಧಿಸಲು ಸಾಧ್ಯವಾಯಿತು ಎಂಬುದು ಸುಳ್ಳು ಎಂದರು.
 
ಕಳೆದ ಲೋಕಸಭೆ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರ ನಾಯಕತ್ವದಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಂಡಿತ್ತು. ಅದರಂತೆ ಕಾಂಗ್ರೆಸ್‌ನ ಭದ್ರ ಕೋಟೆಯಾಗಿದ್ದ ಮಹಾರಾಷ್ಟ್ರ ಹಾಗೂ ಹರಿಯಾಣದ ವಿಧಾನಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಸೋತಿದೆ. ದಿನೇ ದಿನೇ ಕಾಂಗ್ರೆಸ್ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿರುವ ಬಗ್ಗೆ ಹೆಚ್. ವಿಶ್ವನಾಥ್ ಖೇದ ವ್ಯಕ್ತಪಡಿಸಿದ್ದಾರೆ.
 

ವೆಬ್ದುನಿಯಾವನ್ನು ಓದಿ