ಪ್ರಜಾಪ್ರಭುತ್ವ ಅಪಾಯದಲ್ಲಿದೆ: ಮೋದಿ ವಿರುದ್ಧ ಮನಮೋಹನ್ ಕಿಡಿ

ಬುಧವಾರ, 27 ಮೇ 2015 (12:48 IST)
ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಅಧಿಕಾರಕ್ಕೇರಿ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸರಕಾರದ ವಿರುದ್ಧ ಚಾಟಿ ಬೀಸಿರುವ ಮಾಜಿ ಪ್ರಧಾನಿ ಮನ ಮೋಹನ್ ಸಿಂಗ್ 'ಕೇಂದ್ರ ಸರಕಾರದ ಒಂದು ವರ್ಷದ ಸಾಧನೆ ಶೂನ್ಯ ಎಂದಿದ್ದಾರಲ್ಲದೇ ಭಾರತದ ಪ್ರಜಾಪ್ರಭುತ್ವ ಅಪಾಯದಲ್ಲಿದೆ', ಎಂದು ಆತಂಕವನ್ನು ವ್ಯಕ್ತಪಡಿಸಿದ್ದಾರೆ.

"ನಮ್ಮ ಯೋಜನೆಗಳಿಗೆ ಮರುನಾಮಕರಣ ಮಾಡಿ ಸರಕಾರ ಜಾರಿಯಲ್ಲಿ ತರುತ್ತಿದೆ. ಮೇಕ್ ಇನ್ ಇಂಡಿಯಾ ಸಹ ನಮ್ಮದೇ ಪರಿಕಲ್ಪನೆ. ನಮ್ಮ ಯೋಜನೆಯನ್ನೇ ಹೊಸದಾಗಿ ಜಾರಿ ಮಾಡುತ್ತಿದ್ದಾರೆ.ನಾವು ಅಧಿಕಾರದಲ್ಲಿದ್ದಾಗ ಅಭಿವೃದ್ಧಿ ದರ 8.5ರಷ್ಟಿತ್ತು. ಬಿಜೆಪಿ ನೇತೃತ್ವದ ಸರಕಾರ ಅಧಿಕಾರಕ್ಕೇರಿದ ಮೇಲೆ ದೇಶದ ಆರ್ಥಿಕ ಸ್ಥಿತಿ  ಸುಧಾರಿಸಿಲ್ಲ. ಆರ್ಥಿಕತೆ ಸುಧಾರಿಸಲು ಸರಕಾರ ಯಾವುದೇ ಹೊಸ ನೀತಿಗಳನ್ನು ಜಾರಿಗೆ ತಂದಿಲ್ಲ", ಎಂದು ಸರ್ಕಾರದ ವಿರುದ್ಧ ಸಿಂಗ್ ಹರಿಹಾಯ್ದಿದ್ದಾರೆ. 
 
"ಕಾಂಗ್ರೆಸ್ ವಿರುದ್ಧ ಭೃಷ್ಟಾಚಾರ ಆರೋಪ ಮಾಡಿದ್ದ ಬಿಜೆಪಿ ದೇಶದಲ್ಲಿನ ಭೃಷ್ಟಾಚಾರ ತಡೆಯುವಲ್ಲಿ ಸಂಪೂರ್ಣ ವಿಫಲವಾಗಿದೆ
ಭಾರತದ ಪ್ರಜಾಪ್ರಭುತ್ವಕ್ಕೆ ಬೆದರಿಕೆಯ ಕರಿನೆರಳಿನಲ್ಲಿ ಸಾಗುತ್ತಿದೆ. ಜಾತ್ಯಾತೀತ ನೀತಿಗೆ ಮೋದಿ ಸರಕಾರ ಬೆದರಿಕೆ ಒಡ್ಡಿದೆ", ಎಂದು ಮಾಜಿ ಪ್ರಧಾನಿ ಕಳವಳ ತೋರ್ಪಡಿಸಿದ್ದಾರೆ.  
 
"ಸಾರ್ವಜನಿಕರ ಹಣವನ್ನು ನನ್ನ ಉತ್ಕರ್ಷಕ್ಕೆ ಉಪಯೋಗಿಸಿಲ್ಲ. ಸರ್ಕಾರಿ ಕಚೇರಿಯನ್ನು ನನ್ನ ಸ್ವಂತಕ್ಕೆ ಬಳಸಿರಲಿಲ್ಲ",  ಎಂದು ಸಿಂಗ್ ತಮ್ಮ ವಿರುದ್ಧದ ಆರೋಪಕ್ಕೆ ಸ್ಪಷ್ಟನೆ ನೀಡಿದ್ದಾರೆ. 

ವೆಬ್ದುನಿಯಾವನ್ನು ಓದಿ