ಬಿಜೆಪಿ ಸೇರಿದ ಮಾಜಿ ಕ್ರಿಕೆಟಿಗ

ಸೋಮವಾರ, 8 ಜೂನ್ 2015 (11:51 IST)
ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ವಿಜಯ್ ಭಾರದ್ವಾಜ್ ಹೊಸ ಇನ್ನಿಂಗ್ಸ್ ಪ್ರಾರಂಭಿಸಿದ್ದಾರೆ. 39 ವರ್ಷದ ಭಾರದ್ವಾಜ್ ಇನ್ನು ಮುಂದೆ ಭಾರತೀಯ ಜನತಾ ಪಕ್ಷದಲ್ಲಿ ಬ್ಯಾಟ್ ಬೀಸಲು ಮುಂದಾಗಿದ್ದಾರೆ. ಭಾನುವಾರ ಅವರು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾದರು.
ಬಿಜೆಪಿಯ ಪ್ರಾಥಮಿಕ ಸದಸ್ಯತ್ವ ಪಡೆದ ಅವರ ನಿವಾಸಕ್ಕೆ ಭಾನುವಾರ ಭೇಟಿ ನೀಡಿದ ಕೇಂದ್ರ ಸಚಿವ ಅನಂತ್ ಕುಮಾರ್ ಪಕ್ಷಕ್ಕೆ ಸ್ವಾಗತ ಕೋರಿದ್ದಾರೆ. 
 
ಪಕ್ಷ ಸೇರ್ಪಡೆ ನಂತರ ಮಾತನಾಡಿದ ಅಂತಾರಾಷ್ಟ್ರೀಯ ಕ್ರಿಕೆಟಿಗ ವಿಜಯ್ ಭಾರದ್ವಾಜ್, "ನಾನು ನರೇಂದ್ರ ಮೋದಿ ಅಭಿಮಾನಿ. ಈ ಕಾರಣದಿಂದ ಕೇಸರಿ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ. ನನಗಿದು ಖುಷಿ ತಂದಿದೆ. ಮೋದಿ ದೇಶಕ್ಕಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ದೇಶದ ಜನರಲ್ಲಿ  ಭರವಸೆಯನ್ನು ಹುಟ್ಟಿಸಿದ್ದಾರೆ. ಅವರ ಮುಂದಾಳತ್ವದ ಸರ್ಕಾರ ಭ್ರಷ್ಟಾಚಾರದಿಂದ ದೂರವಿದೆ. ಆರೋಪಗಳಿಲ್ಲದೆ ಅತ್ಯುತ್ತಮ ಕೆಲಸ ಮಾಡ್ತಿದ್ದಾರೆ", ಎಂದಿದ್ದಾರೆ.
 
ಕರ್ನಾಟಕ ರಣಜಿ ತಂಡದ ಬೆನ್ನೆಲುಬಾಗಿದ್ದ ಭಾರದ್ವಾಜ್ ರಾಷ್ಟ್ರೀಯ ತಂಡದ ಪರವಾಗಿ 3 ಟೆಸ್ಟ್ ಮತ್ತು 10 ಏಕದಿನ ಪಂದ್ಯಗಳನ್ನು ಆಡಿದ್ದಾರೆ. 
 
ಇಲ್ಲಿಯವರೆಗೆ ದೇಶಾದ್ಯಂತ 10 ಕೋಟಿಗೂ ಹೆಚ್ಚು ಜನರು ಬಿಜೆಪಿ ಸದಸ್ಯತ್ವನ್ನು ಪಡೆದುಕೊಂಡಿದ್ದು ವಿಶ್ವದಲ್ಲಿಯೇ ಅತಿ ದೊಡ್ಡ ಪಕ್ಷ ಎಂಬ ಹೆಗ್ಗಳಿಕೆಗೆ ಬಿಜೆಪಿ ಪಾತ್ರವಾಗಿದೆ.

ವೆಬ್ದುನಿಯಾವನ್ನು ಓದಿ