ಐಸಿಯುಗೆ ದಾಖಲಾದ ಜಸ್ವಂತ್ ಸಿಂಗ್

ಗುರುವಾರ, 2 ಏಪ್ರಿಲ್ 2015 (11:51 IST)
ಕಳೆದ ಆಗಸ್ಟ್ ತಿಂಗಳಿಂದ ಕೋಮಾ ಸ್ಥಿತಿಯಲ್ಲಿರುವ ಮಾಜಿ ಕೇಂದ್ರ ಸಚಿವ ಜಸ್ವಂತ್ ಸಿಂಗ್ ಜ್ವರ ಮತ್ತು ಉಸಿರಾಟದ ತೊಂದರೆಗೊಳಗಾಗಿದ್ದು ನವದೆಹಲಿಯ ಆರ್ಮಿ ರಿಸರ್ಚ್ ಆ್ಯಂಡ್ ರೆಫರಲ್ ಹಾಸ್ಪಿಟಲ್ ‌ಗೆ ದಾಖಲಾಗಿದ್ದಾರೆ. 

ಹಲವಾರು ತಿಂಗಳುಗಳಿಂದ ಕೋಮಾವಸ್ಥೆಯಲ್ಲಿರುವ  ಅವರಿಗೆ ಇತ್ತೀಚಿಗೆ ಜ್ವರ ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ.  ಹೀಗಾಗಿ ಅವರ ಕುಟುಂಬಸ್ಥರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರನ್ನು ತೀವೃ ನಿಗಾ ಘಟಕದಲ್ಲಿಡಲಾಗಿದ್ದು, ಸರಾಗ ಉಸಿರಾಟಕ್ಕೆ ಸಹಾಯಕವಾಗಲೆಂದು ವೆಂಟಿಲೇಟರ್ ನೀಡಲಾಗಿದೆ. ಸಿಂಗ್ ಆರೋಗ್ಯ ಸ್ಥಿರವಾಗಿದ್ದು ಸದ್ಯದಲ್ಲಿಯೇ ಅವರನ್ನು ಬಿಡುಗಡೆ ಮಾಡಲಾಗುವುದು ಎಂದು ಆಸ್ಪತ್ರೆಯ ಹಿರಿಯ ವೈದ್ಯರು ತಿಳಿಸಿದ್ದಾರೆ. 
 
76 ವರ್ಷದ ಬಿಜೆಪಿ ನಾಯಕ ಕಳೆದ ಆಗಸ್ಟ್ 8 ರಂದು ಗಂಭೀರ ಪರಿಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ತಲೆಗೆ ಏಟಾಗಿದ್ದುದರಿಂದ ಅಂದಿನಿಂದ ಅವರು ಕೋಮಾವಸ್ಥೆಗೆ ಜಾರಿದ್ದರು. 
 
ಹಿಂದಿನ ಎನ್‌ಡಿಎ ಆಡಳಿತ ಅವಧಿಯಲ್ಲಿ ವಿದೇಶಾಂಗ ಮತ್ತು ಹಣಕಾಸು ಖಾತೆ ನಿರ್ವಹಿಸಿದ್ದ ಬಿಜೆಪಿಯ ಮಾಜಿ ಮುಖಂಡ, 
ರಾಜಸ್ಥಾನದ ಬಾರ್ಮರ್ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ನೀಡಲು ಪಕ್ಷ ನಿರಾಕರಿಸಿದಾಗ ಸ್ವತಂತ್ರವಾಗಿ ಕಣಕ್ಕಿಳಿದಿದ್ದರು. ಈ ಕಾರಣಕ್ಕೆ ಬಿಜೆಪಿ ಅವರನ್ನು ಪಕ್ಷದಿಂದ ಬಹಿಷ್ಕರಿಸಿತ್ತು. 

ವೆಬ್ದುನಿಯಾವನ್ನು ಓದಿ