ಮೋದಿ ಸರಕಾರಕ್ಕೀಗ ಆರ್‌ಎಸ್ಎಸ್ ಅಂಗಸಂಸ್ಥೆಗಳ ಸವಾಲು

ಬುಧವಾರ, 6 ಮೇ 2015 (18:09 IST)
ಭೂ ಸ್ವಾಧೀನ ಮಸೂದೆ ವಿರುದ್ಧ ವಿರೋಧ ಪಕ್ಷಗಳಿಂದ ಪ್ರತಿಭಟನೆ ವ್ಯಕ್ತವಾದ ಬೆನ್ನಲ್ಲೇ, ತಮ್ಮ ಸೈದ್ಧಾಂತಿಕ ಗುರು ಆರ್‌ಎಸ್ಎಸ್ ಅಂಗ ಸಂಸ್ಥೆಗಳಿಂದಲೂ ಪ್ರತಿಭಟನೆ ವ್ಯಕ್ತವಾಗಿರುವುದರಿಂದ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಮುಜುಗರಕ್ಕೊಳಗಾಗಿದೆ. 

ಮಸೂದೆಗೆ ಸಂಬಂಧಿಸಿದಂತೆ ಎನ್‌ಡಿಎ ಸರಕಾರ ತಮ್ಮ ಬೇಡಿಕೆಗಳಿಗೆ ಒಪ್ಪದಿದ್ದರೆ, ಈ ಕುರಿತು ಸಾರ್ವಜನಿಕ ಅರಿವು ಮೂಡಿಸುತ್ತೇವೆ ಎಂದು ಪಕ್ಷಭೇದ ಮರೆತು ವಿರೋಧ ಪಕ್ಷಗಳೆಲ್ಲ ಒಟ್ಟಾಗಿ ಘೋಷಿಸಿವೆ. ಈ ಸಂದರ್ಭದಲ್ಲಿ ಸ್ವದೇಶಿ ಜಾಗರಣ ಮಂಚ್  (SJM) ವಿವಾದಾಸ್ಪದ ಭೂ ಸ್ವಾಧೀನ ಮಸೂದೆ ವಿರುದ್ಧ ಬೀದಿಗಿಳಿದು ವಿರೋಧಿಸುತ್ತಿದೆ. 
 
ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದ ಸ್ವದೇಶಿ ಜಾಗರಣ ಮಂಚ್, ಸರಕಾರ ದೀನ್ ದಯಾಳ್ ಉಪಾಧ್ಯಾಯ್ ಅವರ ಸಿದ್ಧಾಂತಗಳಾದ ಸ್ವದೇಶಿ ಚಿಂತನೆ ಮತ್ತು ರಾಜಕೀಯ ಮತ್ತು ಆರ್ಥಿಕ ವಿಕೇಂದ್ರಿಕರಣಗಳನ್ನು ಪರಿಗಣಿಸುವುದಿಲ್ಲವೆಂಬುದು ಅದು ಜಾರಿಯಲ್ಲಿ ತಂದಿರುವ ಕಾಯಿದೆಗಳಿಂದಲೇ ರುಜುವಾತಾಗಿದೆ ಎಂದು ದೂರಿದೆ. 
 
ಭೂಸ್ವಾಧೀನ ಮಸೂದೆ ರೈತ ಮತ್ತು ಬಡವರ ವಿರೋಧಿ ನೀತಿಗಳನ್ನು ಹೊಂದಿದೆ ಎಂದು ಭಾರತೀಯ ಮಜ್ದೂರ್ ಸಂಘ, ಸ್ವದೇಶಿ ಜಾಗರಣೆ ಮಂಚ್ ಮುಂತಾದ ಸಂಘಟನೆಗಳು ಧರಣಿಗಿಳಿದಿವೆ. "ವಿಶ್ವದಾದ್ಯಂತ ವಿಫಲಗೊಂಡ ಯೋಜನೆಗಳನ್ನು ಮೋದಿ ಸರಕಾರ ಹೇರಲು ಹೊರಟಿದೆ ಮತ್ತು ಬಡವರ ಮತ್ತು ವಂಚಿತ ಸಮುದಾಯದವರ ಹಿತವನ್ನು ದೂರಕ್ಕೆ ಸರಿಸಿದೆ", ಎಂದು ಸ್ವದೇಶಿ ಜಾಗರಣ ಮಂಚ್ ಚಿಂತಕ ಕೆ.ಎನ್. ಗೋವಿಂದಾಚಾರ್ಯ ಆರೋಪಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ