ರಾಧೆ ಮಾ ವಿರುದ್ಧ ಮತ್ತೆ ಎಫ್ಐಆರ್!

ಬುಧವಾರ, 2 ಸೆಪ್ಟಂಬರ್ 2015 (13:27 IST)
ಸ್ವಯಂ ಘೋಷಿತ ದೇವ ಮಹಿಳೆ ರಾಧೆ ಮಾಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಅವರ ವಿರುದ್ಧ ಮುಂಬೈ ಪೊಲೀಸರು ಮಂಗಳವಾರ ಹೊಸ ಎಫ್‌ಐಆರ್ ದಾಖಲಿಸಿದ್ದಾರೆ. ಈ ಮೂಲಕ ವರದಕ್ಷಿಣೆ ಕಿರುಕುಳ ಆರೋಪದ ಮೇಲೆ ಕಳೆದ ಒಂದು ತಿಂಗಳಿಂದ ವಿಚಾರಣೆಯನ್ನು ಎದುರಿಸುತ್ತಿರುವ ರಾಧೆ ಮಾಗೆ ಬಿಕ್ಕಟ್ಟು ಹೆಚ್ಚಿದಂತಾಗಿದೆ.
 
ರಾಧೆ ಮಾ ಮಾಜಿ ಭಕ್ತೆ, ಟಿವಿ ನಟಿ, ಬಿಗ್‌ಬಾಸ್ ಸ್ಪರ್ಧಿ ಡಾಲಿ ಬಿಂದ್ರಾ ನೀಡಿದ್ದ ದೂರನ್ನು ಆಧರಿಸಿ ಮುಂಬೈ ಪೊಲೀಸರು ಬುಧವಾರ ಹೊಸ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
 
ಹಿಂಸೆ, ಬೆದರಿಕೆ, ಲೈಂಗಿಕ ಕಿರುಕುಳ ಆರೋಗಳನ್ನು ಹೊರಿಸಿ ಡಾಲಿ ದೂರು ನೀಡಿದ್ದರು. 'ತಮ್ಮ ಪುರುಷ ಭಕ್ತರ ಜತೆ ಲೈಂಗಿಕ ಸಂಪರ್ಕ ನಡೆಸುವಂತೆ ನಾನು ರಾಧೆ ಮಾ ಸತ್ಸಂಗದಲ್ಲಿ ಭಾಗವಹಿಸಿದ್ದ ಸಮಯದಲ್ಲಿ ನನ್ನ ಮೇಲೆ ಒತ್ತಡ ಹೇರಲಾಗಿತ್ತು. ಇದು ರಾಧೆ ಮಾ ಆಯೋಜಿಸುವ ಸತ್ಯಂಗದ ಸಮಯದಲ್ಲಿ ಸಾಮಾನ್ಯ ಸಂಗತಿ', ಎಂದು ಡಾಲಿ ಬೊರಿವಲಿ ಪೊಲೀಸ್ ಠಾಣೆಯಲ್ಲಿ ನೀಡಿದ್ದ ದೂರಿನಲ್ಲಿ ತಿಳಿಸಿದ್ದರು. 
 
ಈ ಹಿನ್ನೆಲೆಯಲ್ಲಿ ರಾಧೆ ಮಾ ಮತ್ತು ಅವರ ಕುಟುಂಬದ 12ಕ್ಕೂ ಹೆಚ್ಚು ಸದಸ್ಯರು ಮತ್ತು ಸಹವರ್ತಿಗಳ ವಿರುದ್ಧ ಬೊರಿವಿಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. 
 
"ಟಿವಿ ನಟಿ ಡಾಲಿ ಬಿಂದ್ರಾ ನೀಡಿರುವ ದೂರು ಆಧರಿಸಿ ಭಾರತೀಯ ದಂಡಸಂಹಿತೆ, 354, 506 (2), 109, 120 ಬಿ ಅಡಿಯಲ್ಲಿ ಬೊರಿವಲಿ ಪೊಲೀಸ್ ಠಾಣೆಯಲ್ಲಿ  ರಾಧೆ ಮಾ, ಸಂಜೀವ್ ಗುಪ್ತಾ, ತಾಳ್ಳಿ ಬಾಬಾ, ಭೂಪೇಂದ್ರ ಮತ್ತಿತರರ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ", ಎಂದು ಹೆಚ್ಚುವರಿ ಪೊಲೀಸ್ ಆಯುಕ್ತರಾದ (ಉತ್ತರ ವಿಭಾಗ) ಫತೇಹ್ ಸಿಂಗ್ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ