ಉಗ್ರ ಮಸೂದ್ ಅಜರ್‌ನಿಂದ ಲಲಿತ್ ಮೋದಿವರೆಗೆ ಎನ್‌ಡಿಎ ಸರಕಾರ ನೆರವು ನೀಡಿದೆ: ಕಾಂಗ್ರೆಸ್

ಬುಧವಾರ, 1 ಜುಲೈ 2015 (19:02 IST)
ಲಲಿತ್ ಮೋದಿ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಕಾಂಗ್ರೆಸ್, ಉಗ್ರ ಮಸೂದ್ ಅಜರ್‌ನಿಂದ ಹಿಡಿದು ಲಲಿತ್ ಮೋದಿಯವರೆಗೆ ಎನ್‌ಡಿಎ ಸರಕಾರ ನೆರವು ನೀಡಿದೆ ಎಂದು ಆರೋಪಿಸಿದೆ.
 
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲಾ ಮಾತನಾಡಿ, ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಲಂಡನ್‌ನಲ್ಲಿ ನೆಲೆಸಿರುವ ಲಲಿತ್ ಮೋದಿಯವರನ್ನು ಎಷ್ಟು ಬಾರಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎನ್ನುವುದನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು. 
 
ಲಲಿತ್ ಮೋದಿಯೊಂದಿಗೆ ಸುಷ್ಮಾ ಸ್ವರಾಜ್ ಅವರ ಪತಿ ಸ್ವರಾಜ್ ಕೌಶಲ್ ಮತ್ತು ಪುತ್ರಿ ವ್ಯವಹಾರಿಕ ಸಂಬಂಧ ಹೊಂದಿರುವ ವಿವರಗಳನ್ನು ದೇಶದ ಜನತೆಗೆ ತಿಳಿಸಬೇಕು ಎಂದರು.  
 
ಕೇಂದ್ರದಲ್ಲಿರುವ ಎನ್‌ಡಿಎ ಸರಕಾರ ಪ್ರಖ್ಯಾತ ಉಗ್ರಗಾಮಿ ಮೌಲಾನಾ ಮಸೂದ್ ಅಜರ್‌ನಿಂದ ಲಲಿತ್ ಮೋದಿವರೆಗೆ ಕಂದಹಾರ್ದಿಂದ ಲಂಡನ್‌ವರೆಗೆ ಮಾನವೀಯತೆಯ ಆಧಾರದ ಮೇಲೆ ನೆರವು ನೀಡಿದೆ ಎಂದು ಲೇವಡಿ ಮಾಡಿದರು.    
 
ಯುಪಿಎ ಸರಕಾರ ಅಧಿಕಾರದಲ್ಲಿದ್ದಾಗ ಲಲಿತ್ ಮೋದಿ ಕುರಿತಂತೆ ಇಂಗ್ಲೆಂಡ್ ಅಧಿಕಾರಿಗಳು ರವಾನಿಸಿದ ದಾಖಲೆಗಳನ್ನು ಮೋದಿ ಸರಕಾರ ಬಿಡುಗಡೆಗೊಳಿಸಬೇಕು ಎಂದು ಕಾಂಗ್ರೆಸ್ ವಕ್ತಾರ್ ರಣದೀಪ್ ಸುರ್ಜೆವಾಲಾ ಒತ್ತಾಯಿಸಿದ್ದಾರೆ.  
 

ವೆಬ್ದುನಿಯಾವನ್ನು ಓದಿ