ಪೃಥ್ವಿರಾಜ್ ಚೌಹಾಣ್ ಮಾನಸಿಕ ಸ್ಥಿತಿ ಐಸಿಯುನಲ್ಲಿರುವ ರೋಗಿಯಂತಿದೆ: ಶಿವಸೇನಾ

ಸೋಮವಾರ, 15 ಸೆಪ್ಟಂಬರ್ 2014 (11:33 IST)
ಶಿವಸೇನಾ ವರಿಷ್ಠ ಉದ್ಧವ್ ಠಾಕ್ರೆ ಕುರಿತು ಟೀಕೆ ಮಾಡಿದ್ದ ಮಹಾರಾಷ್ಟ್ರ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್ ವಿರುದ್ಧ ಹರಿಹಾಯ್ದಿರುವ  ಸೇನೆ ಕಾಂಗ್ರೆಸ್ ನಾಯಕನ ಮಾನಸಿಕ ಸ್ಥಿತಿ ಐಸಿಯುನಲ್ಲಿರುವ  ರೋಗಿಯ ಮಾನಸಿಕ ಸ್ಥಿತಿಯಂತೆ ಅಸ್ಥಿರವಾಗಿದೆ ಎಂದು ಕಿಚಾಯಿಸಿದೆ. 

ಸುದ್ದಿ ವಾಹಿನಿಯೊಂದರ ಜತೆ ಮಾತನಾಡುತ್ತಿದ್ದ ಚೌಹಾನ್  ಸರಕಾರ ನಡೆಸಲು ಉದ್ಧವ್ ಅವರಲ್ಲಿ ಆಡಲಿತಾತ್ಮಕ ಅನುಭವದ ಕೊರತೆ ಇದ್ದ ಕಾರಣಕ್ಕೆ  1995 ರಲ್ಲಿ ಅಧಿಕಾರಕ್ಕೇರಿದ್ದ ಬಿಜೆಪಿ- ಸೇನಾ  ಮೈತ್ರಿಕೂಟದ ಸರಕಾರದಲ್ಲಿ ಅವರಿಗೆ ಸ್ಥಾನ ಪಡೆಯಲು ವಿಫಲವಾಗಿದ್ದರು ಎಂದು ಹೇಳಿದ್ದರು. 
 
ಅವರ ಈ ಹೇಳಿಕೆಯ ವಿರುದ್ಧ ಕೆಂಡಾಮಂಡಲವಾಗಿರುವ ಸೇನೆ 'ಉದ್ಧವ್‌ರಲ್ಲಿ ಅನುಭವದ ಕೊರತೆ ಇದೆ ಎಂದು ಮಹಾರಾಷ್ಟ್ರ ಸಿಎಂ ಹೇಳುತ್ತಾರೆ. ಅವರು ಮುಖ್ಯಮಂತ್ರಿಯಾದಾಗ ಯಾವ ಅನುಭವವನ್ನು ಹೊಂದಿದ್ದರು? ಮುಂಬರುವ ಚುನಾವಣೆಯಲ್ಲಿ ಕಣಕ್ಕಿಳಿಯಲು ಅವರಿಗೆ ಸುರಕ್ಷಿತ ಕ್ಷೇತ್ರ ಸಿಗುತ್ತಿಲ್ಲದ ಕಾರಣಕ್ಕೆ ಅವರ ಮಾನಸಿಕ ಸ್ಥಿತಿ  ತೀವೃ ನಿಗಾ ಘಟಕದಲ್ಲಿರುವ ರೋಗಿಯಂತೆ ಅಸ್ಥಿರವಾಗಿದೆ' ಎಂದು  ತನ್ನ ಮುಖವಾಣಿ ಸಾಮ್ನಾದ ಸಂಪಾದಕೀಯ ಪುಟದಲ್ಲಿ ಕಿಡಿ ಕಾರಿದೆ. 

'ಹೀನಾಯವಾಗಿ ಸೋತ ರಾಹುಲ್ ಗಾಂಧಿ ಬಳಿ ಪ್ರಧಾನಿ ಹುದ್ದೆ ಆಕಾಂಕ್ಷೆಯನ್ನಿಟ್ಟುಕೊಳ್ಳಲು ನಿಮ್ಮ ಬಳಿ ಯಾವ ಅನುಭವ ಇದೆ ಎಂದು ಕೇಳಲು ಚೌಹಾಣರಿಗೆ ಧೈರ್ಯವಿದೆಯೇ?'ಎಂದು ಕೇಸರಿ ಪಕ್ಷ ಸವಾಲೆಸೆದಿದೆ.

ವೆಬ್ದುನಿಯಾವನ್ನು ಓದಿ