ಭದ್ರತಾ ಸಿಬ್ಬಂದಿಗಳ ಎದುರೇ ನಾಲ್ಕನೇ ಬಾರಿಗೆ ಆ್ಯಸಿಡ್ ದಾಳಿಗೆ ತುತ್ತಾದ ಗ್ಯಾಂಗ್ ರೇಪ್ ಸಂತ್ರಸ್ತೆ

ಭಾನುವಾರ, 2 ಜುಲೈ 2017 (11:38 IST)
9 ವರ್ಷಗಳ ಹಿಂದೆ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ಮಹಿಳೆಯೊಬ್ಬರ ಮೇಲೆ  ನಾಲ್ಕನೇ ಬಾರಿಗೆ ಆ್ಯಸಿಡ್ ದಾಳಿ ಮಾಡಲಾಗಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
 
ಲಖನೌನ ಅಲಿಗಂಜ್ ನಲ್ಲಿರುವ ತನ್ನ ಹಾಸ್ಟೆಲ್ ನಲ್ಲಿ ತಂಗಿದ್ದ ವೇಳೆಯಲ್ಲಿ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಆ್ಯಸಿಡ್ ಎರಚಿ ಪರಾರಿಯಾಗಿದ್ದಾರೆ. ಮಹಿಳೆಯ ಮುಖದ ಬಲಭಾಗಕ್ಕೆ ಹಾನಿಯಾಗಿದ್ದು, ಕೂಡಲೇ  ಗಾಯಾಳು ಮಹಿಳೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಹಿಳೆ ನೀರು ತರಲು ಎಂದು ಹಾಸ್ಟೆಲ್ ಸಮೀಪದ ಬೋರ್ ವೆಲ್ ಬಂದಾಗ ಈ ದಾಳಿ ಮಾಡಲಾಗಿದೆ. 
 
ಪೊಲೀಸರು ತಿಳಿಸಿರುವ ಪ್ರಕಾರ ಈ ಹಿಂದೆ ಇದೇ ಮಹಿಳೆ  ಮೇಲೆ 3 ಬಾರಿ ಆ್ಯಸಿಡ್ ದಾಳಿಯಾಗಿತ್ತು. ಇತ್ತೀಚೆಗೆ ಅಂದರೆ ಇದೇ ವರ್ಷದ ಮಾರ್ಚ್ ತಿಂಗಳಿನಲ್ಲಿ ಮಹಿಳೆ ರಾಯ್ ಬರೇಲಿಯಲ್ಲಿರುವ ತನ್ನ ಗ್ರಾಮದಿಂದ ಮಹಿಳೆ ಲಖನೌಗೆ ರೈಲಿನಲ್ಲಿ ವಾಪಸ್ ಆಗುತ್ತಿದ್ದಾಗ ದಾಳಿ ಮಾಡಲಾಗಿತ್ತು.  ಈ ವೇಳೆ ಆಕೆಯ ಕುತ್ತಿಗೆ ಭಾಗಕ್ಕೆ ಹಾನಿಯಾಗಿತ್ತು. ಭದ್ರತಾ ಸಿಬ್ಬಂದಿಗಳು ಮಹಿಳೆಯ ಹಾಸ್ಟೇಲ್ ಬಳಿ ಇರುವಾಗಲೇ ಈ ದಾಳಿ ನಡೆದಿರುವುದು ವಿಪರ್ಯಾಸ.
 
2008ರಲ್ಲಿ ಇದೇ ಮಹಿಳೆಯನ್ನು ಅಕೆಯ ಗ್ರಾಮದಲ್ಲೇ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ  ಗೈದಿದ್ದರು. ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿತ್ತು. ಇಂದಿಗೂ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, 2011ರಲ್ಲಿ ಮೊದಲ ಬಾರಿಗೆ ಮಹಿಳೆ ಮೇಲೆ ಆ್ಯಸಿಡ್ ದಾಳಿಯಾಗಿತ್ತು. ಬಳಿಕ 2013ರಲ್ಲಿ ಮತ್ತು ಇದೇ  ವರ್ಷದ ಮಾರ್ಚ್ ತಿಂಗಳಲ್ಲಿಯೂ ಆ್ಯಸಿಡ್ ದಾಳಿಯಾಗಿತ್ತು. ಇದೀಗ ನಾಲ್ಕನೇ ಬಾರಿ ಮತ್ತೆ ದಾಳಿ ಮಾಡಲಾಗಿದ್ದು, ಮಹಿಳೆ ಮೇಲೆ ಅತ್ಯಾಚಾರ ಆರೋಪ ಎದುರಿಸುತ್ತಿರುವ ಆರೋಪಿಗಳೇ ಈ ದಾಳಿ ನಡೆಸಿರಬಹುದು ಎಂದು ಶಂಕಿಸಲಾಗಿದೆ.
 

ವೆಬ್ದುನಿಯಾವನ್ನು ಓದಿ