ಹಲವು ಕೊಲೆಗಳಲ್ಲಿ ಭಾಗಿಯಾಗಿದ್ದ ವೈದ್ಯ- ಡಾನ್ ಬಂಧನ

ಮಂಗಳವಾರ, 15 ಜುಲೈ 2014 (15:49 IST)
ಹಲವಾರು ಕೊಲೆ ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿದ್ದ ಗ್ಯಾಂಗ್‌ಸ್ಟರ್ ಆರೋಪಿಯನ್ನು ಬೆಳಗಾವಿ ಪೊಲೀಸರ ತಂಡ, ಮಧ್ಯಪ್ರದೇಶದ ಇಂದೋರ್‌ನಲ್ಲಿ ಬಂಧಿಸಿ ನ್ಯಾಯಾಂಗದ ವಶಕ್ಕೆ ಒಪ್ಪಿಸಿದೆ.  
 
ವೃತ್ತಿಯಲ್ಲಿ ವೈದ್ಯನಾಗಿದ್ದ ಆರೋಪಿ ಡಾ.ಪ್ರಕಾಶ್ ಬಂಡಿವಾಡ್ಕರ್ ಅನೇಕ ಹತ್ಯೆ, ಹತ್ಯಾಯತ್ನ, ಸುಲಿಗೆ ಮತ್ತು ಭೂಮಿ ವ್ಯವಹಾರಗಳಲ್ಲಿ ತೊಡಗಿಕೊಂಡಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 
 
ಪೊಲೀಸ್ ಮೂಲಗಳ ಪ್ರಕಾರ, ಆರೋಪಿ ಭೂಗತ ದೊರೆ ಚೋಟಾ ರಾಜನ್, ಸೋಹ್ರಾಬುದ್ದೀನ್ ಶೇಕ್, ಬಾಲು ಢೋಕರೆ, ತುಳಸಿ ಪ್ರಜಾಪತಿ ಮತ್ತು ಶಿವ ಗಾವಡೆಯಂತಹ ಕ್ರಿಮಿನಲ್‌ಗಳೊಂದಿಗೆ ಸಂಪರ್ಕ ಹೊಂದಿದ್ದು ಭೂ ಕಬಳಿಕೆಗೆ ಸಂಬಂಧಿಸಿದಂತಹ ವ್ಯವಹಾರಗಳಲ್ಲಿ ಪ್ರಮುಖ ಪಾತ್ರವಹಿಸಿದ್ದಾನೆ ಎಂದು ತಿಳಿಸಿದ್ದಾರೆ.   
 
ಬೆಳಗಾವಿ ಜಿಲ್ಲೆಯಲ್ಲಿ ಆರೋಪಿ ಬಂಡಿವಾಡ್ಕರ್ ಆರು ಪ್ರಕರಣಗಳಲ್ಲಿ ಬೇಕಾಗಿದ್ದಾನೆ. ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ಕೂಡಾ ಅನೇಕ ಅಪರಾಧಗಳನ್ನು ಎಸಗಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
 
ಆರೋಪಿಯ ಸುಳಿವು ತಿಳಿದ ಪೊಲೀಸ್ ಅಪರಾಧ ವಿಭಾಗದ ಅಧಿಕಾರಿಯಾದ ನಾರಾಯಣ್ ಬರ್ಮನಿ, ವಿ.ಡಿ.ಕಬ್ಬೂರಿ ಮತ್ತು ವಿ.ಎಂ.ಸರ್ದಾರ್ ನೇತೃತ್ವದ ತಂಡ ಮಧ್ಯಪ್ರದೇಶದ ಇಂದೋರ್‌ಗೆ ತೆರಳಿ ಬಂದಿಸಿದ್ದಾರೆ.   
 
 

ವೆಬ್ದುನಿಯಾವನ್ನು ಓದಿ