ಮತಹಾಕಲು ನಿರಾಕರಿಸಿದ್ದಕ್ಕೆ ಇಬ್ಬರನ್ನು ದಾರುಣವಾಗಿ ಹತ್ಯೆಗೈದ ಗ್ಯಾಂಗ್‌ಸ್ಟರ್

ಬುಧವಾರ, 18 ಮೇ 2016 (14:36 IST)
ಸರಪಂಚ್ ಚುನಾವಣೆಯಲ್ಲಿ ತನ್ನ ಸಹೋದರನಿಗೆ ಮತಹಾಕದೆ ಸೋಲಿಗೆ ಕಾರಣವಾಗಿದ್ದಾರೆ ಎನ್ನುವ ಆಕ್ರೋಶದಿಂದ ರೌಡಿಯೊಬ್ಬ, ಸೇನಾಧಿಕಾರಿಯೊಬ್ಬರ ತಂದೆ ಮತ್ತು ಆತನ ಸಹೋದರನನ್ನು ಹತ್ಯೆ ಮಾಡಿದ ಹೇಯ ಘಟನೆ ವರದಿಯಾಗಿದೆ.
 
ಹರಿಯಾಣಾದ ಸೋನಿಪತ್ ಜಿಲ್ಲೆಯಲ್ಲಿ ಘಟನೆ ನಡೆದಿದೆ. ತನ್ನ ಸಹೋದರನಿಗೆ ಮತ ನೀಡಲಿಲ್ಲ ಎನ್ನುವ ಒಂದೇ ಒಂದು ಕಾರಣಕ್ಕೆ ಸ್ಥಳೀಯ ರೌಡಿಯೊಬ್ಬ ಇಬ್ಬರನ್ನು ದಾರುಣವಾಗಿ ಹತ್ಯೆ ಮಾಡಿದ್ದಾನೆ. ಜೀವ ಬೆದರಿಕೆ ಕರೆಗಳು ಬರುತ್ತಿವೆ ಎಂದು ಹಲವಾರು ಬಾರಿ ಪೊಲೀಸರಿಗೆ ಮನವಿ ಮಾಡಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಹತ್ಯೆಯಾದವರ ಕುಟುಂಬದವರು ಕಿಡಿಕಾರಿದ್ದಾರೆ. 
 
ಮೇಜರ್ ಸುಶೀಲ್ ಚಿಕ್ಕಾರಾ ಅವರ 57 ವರ್ಷ ವಯಸ್ಸಿನ ತಂದೆ ಮತ್ತು 25 ವರ್ಷದ ಸಹೋದರ ಅನಿಲ್‌ ಎನ್ನುವವರು ದ್ವಿಚಕ್ರ ವಾಹನದಲ್ಲಿ ಕರವೇರಿ ಗ್ರಾಮದ ಬಳಿ ತೆರಳುತ್ತಿದ್ದಾಗ ರೌಡಿ ಅಜಯ್ ಅಲಿಯಾಸ್ ಕನ್ನು ಚಿಕಾರಾ ಅವರನ್ನು ಗುಂಡಿಟ್ಟು ಹತ್ಯೆ ಮಾಡಿದ್ದನು.
 
ಆರೋಪಿ ಅಜಯ್‌ನನ್ನು ಬಂಧಿಸಲು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಆರೋಪಿಯ ಬಗ್ಗೆ ಮಾಹಿತಿ ನೀಡುವವರಿಗೆ ಐದು ಲಕ್ಷ ರೂಪಾಯಿಗಳ ನಗದು ಬಹುಮಾನ ಘೋಷಿಸಲಾಗಿದೆ ಎಂದು ಪೊಲೀಸ್ ಮಹಾ ನಿರ್ದೇಶಕ ಸಂಜಯ್ ಕುಮಾರ್ ತಿಳಿಸಿದ್ದಾರೆ.
 
ಪೊಲೀಸರ ಬೇಜವಾಬ್ದಾರಿಯಿಂದಾಗಿ ನನ್ನ ತಂದೆ ಮತ್ತು ಸಹೋದರನ ಹತ್ಯೆಯಾಗಿದೆ ಎಂದು ಸೇನಾಧಿಕಾರಿ ಸುಶೀಲ್ ಚಿಕಾರಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

ವೆಬ್ದುನಿಯಾವನ್ನು ಓದಿ