ಸಂಪೂರ್ಣ ಆರ್‌ಜೆಡಿ ಕುಲಕ್ಕೆ ಹುಚ್ಚು ಹಿಡಿದಿದೆ: ಬಿಜೆಪಿ

ಶನಿವಾರ, 10 ಅಕ್ಟೋಬರ್ 2015 (11:38 IST)
ಬಿಹಾರದಲ್ಲೀಗ ಗೋಮಾಂಸದ ರಾಜಕೀಯ ಸುರುವಾಗಿದೆ. ಬಿಜೆಪಿ ಮತ್ತು ಆರ್‌ಜೆಡಿ ಪಕ್ಷಗಳು ಗೋಮಾಂಸ ವಿಷಯವನ್ನಿಟ್ಟುಕೊಂಡು ರಾಜಕೀಯದಾಟವನ್ನು ಆಡುತ್ತಿದ್ದು ದಿನೇ ಪ್ರತಿದಿನ ಈ ಕುರಿತೇ ಹೇಳಿಕೆ, ವಾದ- ಪ್ರತಿವಾದಗಳು ಹೆಚ್ಚುತ್ತಿವೆ. ಕಳೆದ ವಾರ ಆರ್‌ಜೆಡಿ ವರಿಷ್ಠ ಲಾಲು  ಹಿಂದೂಗಳು ಮತ್ತು ವಿದೇಶದಲ್ಲಿರುವ ಭಾರತೀಯರೂ ಗೋಮಾಂಸ ಸೇವನೆ ಮಾಡುತ್ತಾರೆ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ವ್ಯಾಪಕ ವಿರೋಧ, ಖಂಡನೆ ವ್ಯಕ್ತವಾಗಿತ್ತು.


 
ಈಗ ಅದೇ ಪಕ್ಷದ ನಾಯಕ ರಘುವಂಶ ಪ್ರಸಾದ್ ಸಹ 'ವೇದಗಳ ಕಾಲದಲ್ಲಿ ಗೋಮಾಂಸ ಸೇವಿಸಲಾಗುತ್ತಿತ್ತು. ಋಷಿಮುನಿಗಳು ಸಹ ಗೋಮಾಂಸವನ್ನು ಭಕ್ಷಿಸುತ್ತಿದ್ದರು', ಎಂದು ಹೇಳುವುದರ ಮೂಲಕ ಬಿಜೆಪಿ ನಾಯಕರನ್ನು ಕೆಣಕಿದ್ದಾರೆ. 
 
ಇದಕ್ಕೆ ಆಕ್ರೋಶ ವ್ಯಕ್ತ ಪಡಿಸಿರುವ ಬಿಜೆಪಿ ನಾಯಕ ಗಿರಿರಾಜ್ ಸಿಂಗ್, 'ಸಂಪೂರ್ಣ ಆರ್‌ಜೆಡಿ ವಂಶಕ್ಕೆ ಹುಚ್ಚು ಹಿಡಿದಿದೆ ಎನಿಸುತ್ತದೆ. ಅವರ ಹೇಳಿಕೆಯಿಂದ ಹಿಂದೂಗಳ ಭಾವನೆಗೆ ಧಕ್ಕೆ ಉಂಟಾಗಿದೆ. ಇದು ನಮಗೆ ಸಹಸಲಾಗುತ್ತಿಲ್ಲ. ಮತಗಳನ್ನು ಸೆಳೆಯಲು ಲಾಲು ಮತ್ತು ಅವರ ಪಕ್ಷದ ನಾಯಕರು ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ', ಎಂದು ಗುಡುಗಿದ್ದಾರೆ.

ವೆಬ್ದುನಿಯಾವನ್ನು ಓದಿ