ಟಿ20ಯಿಂದ ಭಾರತ್ ಔಟ್: ನೊಂದ ಎಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ

ಶನಿವಾರ, 2 ಏಪ್ರಿಲ್ 2016 (08:12 IST)
ಟಿ20 ವಿಶ್ವಕಪ್ ಸೆಮಿಫೈನಲ್​ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ ತಂಡ ಸೋತಿದ್ದಕ್ಕೆ ಹತಾಶಳಾದ ಗ್ವಾಲಿಯರ್ ಮೂಲದ ಇಂಜಿನಿಯರ್ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. 
 
ಆಕೆ ಡೆತ್ ನೋಟ್ ಬರೆದಿಟ್ಟಿಲ್ಲವಾದರೂ ಭಾರತದ ಜಯಕ್ಕಾಗಿ ದಿನವಿಡಿ ಪ್ರಾರ್ಥನೆ ಮಾಡುತ್ತಿದ್ದ ಆಕೆ ಸೋಲಿನ ಬಳಿಕ ಬಹಳವಾಗಿ ನೊಂದುಕೊಂಡಿದ್ದಳು ಎಂದು ಆಕೆಯ ಪೋಷಕರು ತಿಳಿಸಿದ್ದಾರೆ. 
 
ಗ್ವಾಲಿಯರ್‌ನ ಎಮ್ಐಟಿಎಸ್ ಕಾಲೇಜಿನಲ್ಲಿ ಬಿ.ಟೆಕ್ ಓದುತ್ತಿದ್ದ ಸುರುಭಿ ಕಮಥನ್ ತನ್ನ ಕುಟುಂಬದ ಸದಸ್ಯರ ಜತೆಯಲ್ಲಿ ಕ್ರಿಕೆಟ್ ಪಂದ್ಯವನ್ನು ವೀಕ್ಷಿಸಿದ್ದಳು. ಭಾರತದ ಜಯಕ್ಕಾಗಿ ದೇವರಿಗೆ ಪೂಜೆ ಮಾಡಿ ಮನೆಯವರಿಗೆಲ್ಲ ಆಕೆ ಪ್ರಸಾದವನ್ನು ನೀಡಿದ್ದಳು. ಆದರೆ ಧೋನಿ ಪಡೆ ಸೋತಾಗ ವಿಪರೀತ ಬೇಸರ ವ್ಯಕ್ತ ಪಡಿಸಿದ್ದ ಯುವತಿ ಶುಕ್ರವಾರ ಬೆಳಿಗ್ಗೆ ತನ್ನ ಕೋಣೆಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.
 
ಮೃತಳ ತಂದೆ ಅಬಕಾರಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದು, ತಾಯಿ ಶಿಕ್ಷಕಿಯಾಗಿದ್ದಾರೆ. 
 
ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಆಕೆ ಭಾರತ ತಂಡ ಸೋತಿದ್ದಕ್ಕೆ ನೊಂದು ಸಾವಿಗೆ ಶರಣಾದರೆ ಅಥವಾ ಬೇರೆ ಕಾರಣಕ್ಕೋ ಎಂಬುದು ತನಿಖೆಯ ನಂತರವಷ್ಟೇ ಸ್ಪಷ್ಟವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. 
 
ಮುಂಬೈನ ವಾಂಖಡೆ ಮೈದಾನದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಭಾರತ 192 ರನ್​ಗಳ ಬೃಹತ್ ಮೊತ್ತ ಪೇರಿಸಿದ್ದರು ಕೂಡ, ವಿಂಡೀಸ್ ಪಡೆ ಎದುರು ಸೋಲನ್ನು ಕಂಡಿತ್ತು.

ವೆಬ್ದುನಿಯಾವನ್ನು ಓದಿ