ಮದುವೆಯಾಗಲು ಬಂದ ಅತ್ಯಾಚಾರಿಯನ್ನು ಜೈಲಿಗಟ್ಟಿದ ದಿಟ್ಟ ಹುಡುಗಿ

ಗುರುವಾರ, 26 ಮಾರ್ಚ್ 2015 (17:42 IST)
ಇದು ಸಾಮಾನ್ಯ ಹಳ್ಳಿ ಹುಡುಗಿಯೊಬ್ಬಳು ಅಪರೂಪದ ದಿಟ್ಟತನ ತೋರಿದ ಸತ್ಯ ಘಟನೆ. ನಡೆದಿರುವುದು ವಾರಣಾಸಿ ಜಿಲ್ಲೆಯ ಹಿಂದುಳಿದ ಗ್ರಾಮವೊಂದರಲ್ಲಿ. ತನ್ನ ಮೇಲೆ ಅತ್ಯಾಚಾರ ನಡೆಸಿದ ಆರೋಪಿಯನ್ನು ಮದುವೆಯಾಗೆಂದು ಸಮುದಾಯದ ಹಿರಿಯರು ನೀಡಿದ ತೀರ್ಪನ್ನು ಧೈರ್ಯದಿಂದ ಧಿಕ್ಕರಿಸಿ ನಿಂತ ಹುಡುಗಿ ಹುಡುಗನ ಕಡೆವರು ದಿಬ್ಬಣದ ಜತೆ ಬರುತ್ತಿದ್ದಾಗ ಪೊಲೀಸ್ ಠಾಣೆಗೆ ಧಾವಿಸಿ ದೂರು ನೀಡಿದ್ದಾಳೆ. ಪರಿಣಾಮ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. 

ಸಜೌ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಫೆಬ್ರವರಿ 21 ರಂದು ಯುವಕ ತನ್ನದೇ ಸಮುದಾಯಕ್ಕೆ ಸೇರಿದ ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದ. ಪೀಡಿತಳ ನೋವನ್ನು ಲೆಕ್ಕಕ್ಕೆ ತೆಗೆದುಕೊಳ್ಳದ ಅವರ ಸಮುದಾಯದ ಹಿರಿಯರು ಮತ್ತು ಎರಡು ಕಡೆಯ ಕುಟುಂಬದವರು ಇಬ್ಬರಿಗೂ ಮದುವೆ ಮಾಡಿಸುವ ಮೂಲಕ ರಾಜಿ ಮಾಡಿಕೊಳ್ಳಲು ಬಯಸಿದ್ದರು. ಆದರೆ ಆರೋಪಿ ಮತ್ತು ಪೀಡಿತೆ ಪರಸ್ಪರ ಮದುವೆಯಾಗಲು ಒಪ್ಪಿರಲಿಲ್ಲ.  
 
ಯುವತಿ ಫೆಬ್ರವರಿ 25 ರಂದು ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿದ್ದಳು.
 
ದೂರಿನನ್ವಯ ಕ್ರಮ ಕೈಗೊಳ್ಳುವ ಬದಲು ಪೊಲೀಸರು ಸಹ ಎರಡು ಕಡೆಯವರ ಮೇಲೆ ಒತ್ತಡ ಹಾಕಿ ಸಮಸ್ಯೆಗೆ ಪರಿಹಾರ ಹುಡುಕಲು ಪ್ರಯತ್ನಿಸಿದರು. ಪೊಲೀಸರ  ಮತ್ತು ಹಿರಿಯರ ಒತ್ತಡಕ್ಕೆ ಮಣಿದ ಆರೋಪಿ ಹುಡುಗಿಯನ್ನು ಮದುವೆಯಾಗಲು ಒಪ್ಪಿದ.  ಆಕೆಯ ಅನುಮತಿ ಇಲ್ಲದೆ ಮಂಗಳವಾರ ಮಾರ್ಚ್ 24 ರಂದು ಮದುವೆಯನ್ನು ನಿಗದಿ ಮಾಡಲಾಗಿತ್ತು. 
 
ಮಂಗಳವಾರ ಆರೋಪಿಯ ಕಡೆಯವರು ದಿಬ್ಬಣದ ಜತೆ ಬರುತ್ತಿದ್ದಂತೆ  ಪೊಲೀಸರನ್ನು ಕರೆದ ಯುವತಿ ಆರೋಪಿಯನ್ನು ಬಂಧಿಸುವಂತೆ ಮಾಡಲು ಯಶಸ್ವಿಯಾಗಿದ್ದಾಳೆ. 
 
ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. 

ವೆಬ್ದುನಿಯಾವನ್ನು ಓದಿ