70ರ ವಯಸ್ಸಲ್ಲಿ ಮರುಮದುವೆಯಾದ ಗೂಗಲ್ ಸಿಇಓ ಸುಂದರ್‌ ಪಿಚೈ ಮಾವ

ಬುಧವಾರ, 30 ಸೆಪ್ಟಂಬರ್ 2015 (13:49 IST)
ಗೂಗಲ್‌ ಸಿಇಓ ಸುಂದರ್‌ ಪಿಚೈ ಅವರ ಮಾವ ಓಲಾರಾಮ್‌ ಹರ್ಯಾನಿ  70ರ ವಯಸ್ಸಲ್ಲಿ ಮಂಗಳವಾರ ಪುನರ್‌ ವಿವಾಹವಾಗಿದ್ದಾರೆ. ಇವರ ಪುತ್ರಿ ಅಂಜಲಿ ಸುಂದರ್‌ ಪಿಚೈ (ಗೂಗಲ್‌ ಸಿಇಓ) ಅವರ ಪತ್ನಿಯಾಗಿದ್ದಾರೆ.
 
ಕೆಲ ವರ್ಷಗಳ ಹಿಂದೆ ಪತ್ನಿಯನ್ನು ಕಳೆದುಕೊಂಡಿರುವ ಓಲಾರಾಂ ಸದ್ಯ ಮುಂಬಯಿಯಲ್ಲಿ ವಾಸವಾಗಿದ್ದು, ಕೋಟಾ ನಗರದ ಸಿವಿಲ್‌ ಲೈನ್‌ ಏರಿಯಾದ ನಿವಾಸಿಯಾಗಿರುವ 65ರ ಹರೆಯದ ಮಾಧುರಿ ಶರ್ಮಾ ಅವರ ಜತೆ ಹೊಸ ಬದುಕನ್ನು ಪ್ರಾರಂಭಿಸಿದ್ದಾರೆ. 
 
ಮಿಲಿಟರಿ ಅಧಿಕಾರಿಯಾಗಿದ್ದ ಪತಿಯನ್ನು ಕಳೆದುಕೊಂಡಿರುವ ಮಾಧುರಿ ಶರ್ಮಾ ಅವರಿಗೂ ಸಹ ಇದು ಎರಡನೆಯ ಮದುವೆಯಾಗಿದೆ. ಆರ್ಯ ಸಮಾಜದ ಸಂಪ್ರದಾಯದ ಪ್ರಕಾರ ನಿನ್ನೆ ವಿವಾಹ ಜರುಗಿತು.
 
ಕೋಟಾದ ಸರಕಾರಿ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಓಲಾರಾಂ ಅವರ ಮಗ ಮತ್ತು ಮಗಳು ವಿದೇಶದಲ್ಲಿ ನೆಲಸಿದ್ದಾರೆ. 
 
ತಮ್ಮ ಮದುವೆ ಬಳಿಕ ಅಲ್ಲಿ ಉಪಸ್ಥಿತರಿದ್ದ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಓಲಾರಾಂ ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಇಚ್ಛೆಯಂತೆ ಮುಕ್ತವಾಗಿ ಬದುಕುವ ಹಕ್ಕಿದೆ ಎಂದು ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ