ಆಪಲ್‌ಗೆ ಟಾಂಗ್ ಕೊಡಲು ಗೂಗಲ್ ರಣತಂತ್ರ

ಸೋಮವಾರ, 21 ಜುಲೈ 2014 (17:13 IST)
ಅಂತರ್ಜಾಲ ಕಾಲೊನಿಯಲ್ಲಿ ಗಲ್ಲಿ ಗಲ್ಲಿಗೂ ನುಗ್ಗಿರುವ ಗೂಗಲ್‌ಗೆ ಈಗ ಕಾರೊಳಗೆ ಕಾಲಿಡುವ ಹಠ. ಈ ಆತುರಕ್ಕೆ ಅತ್ತ ಎಲ್‌ಜಿ ಕಂಪನಿಯೂ ಬೆಂಬಲ ನೀಡಿದೆ. ಇತ್ತೀಚೆಗಷ್ಟೇ ಗೂಗಲ್ ಕಂಪನಿ 'ಗೂಗಲ್ ಆಟೊ' ಎಂಬ ಸಾಫ್ಟ್‌ವೇರ್ ಪ್ರದರ್ಶಿಸಿತ್ತು. 
 
ಎಲ್‌ಜಿ ಕಂಪನಿ ಗೂಗಲ್‌ನೊಂದಿಗೆ ಕೈಜೋಡಿಸಿದರೆ ಈ ಯೋಜನೆ ವೇಗ ಪಡೆಯಲಿದೆ. ಯಾಕೆಂದರೆ ಗೂಗಲ್ ಸಾಫ್ಟ್‌ವೇರ್‌ಗೆ ಎಲ್‌ಜಿ ಹಾರ್ಡ್‌ವೇರ್ ಒದಗಿಸಲಿದೆ. ಇದರಿಂದ ಯೋಜನೆ ಅಳವಡಿಕೆ ವೇಗ ಹೆಚ್ಚಲಿದೆ.
 
ಈಗಾಗಲೇ ಆಪಲ್ ಕಂಪನಿ ಕೆಲವು ಕಂಪನಿಗಳೊಂದಿಗೆ ಕಾರುಗಳಲ್ಲಿ ಆಪಲ್ ಸಾಫ್ಟ್‌ವೇರ್ ಅಳವಡಿಸುವ ಕುರಿತು ಒಪ್ಪಂದ ಮಾಡಿಕೊಂಡಿದೆ. ಆದರೆ ಗೂಗಲ್ ಕಂಪನಿ ಇಲ್ಲೂ ಆಪಲ್‌ಗೆ ಟಾಂಗ್ ಕೊಡಲು ಸಿದ್ಧವಾಗಿದೆ. ಆಂಡ್ರಾಯ್ಡ್ ಸಾಫ್ಟ್‌ವೇರನ್ನು ಉಚಿತವಾಗಿ ನೀಡಿ ಮಾರುಕಟ್ಟೆ ಕಬಳಿಸಿದಂತೆ 'ಗೂಗಲ್ ಆಟೊ'ವನ್ನೂ ಉಚಿತವಾಗಿ ನೀಡುವ ಯೋಜನೆ ಗೂಗಲ್‌ನದ್ದು ಎನ್ನಲಾಗಿದೆ.
 
ಈಗಾಗಲೇ ಗೂಗಲ್ ಹಲವು ಕಾರು ಕಂಪನಿಗಳನ್ನು ಒಟ್ಟು ಸೇರಿಸಿ, ಈ ಬಗ್ಗೆ ಸಭೆಯನ್ನೂ ನಡೆಸಿದೆ. ಮೊಬೈಲ್ ಮಾರುಕಟ್ಟೆಯಲ್ಲಿ ಆಪಲ್ಲನ್ನು ಹಣಿಯಲು ಗೂಗಲ್ ಸಂಸ್ಥೆ ಓಪನ್ ಮೊಬೈಲ್ ಅಲೈಯನ್ಸ್ ನಿರ್ಮಿಸಿದಂತೆ ಕಾರುಗಳ ಕ್ಷೇತ್ರದಲ್ಲಿ ಓಪನ್ ಆಟೊ ಅಲೈಯನ್ಸ್ ರಚಿಸಿದೆ. ಇದರಲ್ಲಿ ಆಡಿ, ಜನರಲ್ ಮೋಟಾರ್ಸ್, ಹೋಂಡಾ, ಹುಂಡೈ ಮುಂತಾದ ಕಂಪನಿಗಳು ಇದರಲ್ಲಿ ಭಾಗಿಯಾಗಿವೆ. ಅಲ್ಲಿಗೆ ಆಂಡ್ರಾಯ್ಡ್ ಹಾದಿಯಲ್ಲೇ 'ಆಂಡ್ರಾಯ್ಡ್ ಆಟೋ' ಕೂಡ ಸಾಗುವುದು ಬಹುತೇಕ ಖಚಿತ.
 

ವೆಬ್ದುನಿಯಾವನ್ನು ಓದಿ