ಏಕ ಶ್ರೇಣಿ, ಏಕ ಪಿಂಚಣಿ: ಇಂದು ಘೋಷಣೆ ಸಾಧ್ಯತೆ

ಶನಿವಾರ, 5 ಸೆಪ್ಟಂಬರ್ 2015 (11:49 IST)
ನಿವೃತ್ತ ಸೈನಿಕರ ಬಹುಕಾಲದ ಬೇಡಿಕೆ 'ಏಕ ಶ್ರೇಣಿ, ಏಕ ಪಿಂಚಣಿ'ಯನ್ನು ಕೇಂದ್ರ ಸರ್ಕಾರ ಇಂದು ಘೋಷಿಸುವ ಸಾಧ್ಯತೆ ಇದೆ. ಮಧ್ಯಾಹ್ನ 3 ಗಂಟೆಗೆ ರಕ್ಷಣಾ ಸಚಿವರಾದ ಮನೋಹರ್ ಪರಿಕ್ಕರ್ ಯೋಜನೆಯನ್ನು ಘೋಷಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ನಿವೃತ್ತ ಯೋಧರ 98% ಬೇಡಿಕೆಯನ್ನು ಈಡೇರಿಸಲು ಸರ್ಕಾರ ಒಪ್ಪಿಕೊಂಡಿದೆ. ಆದರೆ ಪಿಂಚಣಿ ಪರಿಷ್ಕರಣೆಯನ್ನು ಒಂದು ಅಥವಾ ಎರಡು ವರ್ಷಗಳಿಗೊಮ್ಮೆ ಮಾಡಲು ಸರ್ಕಾರ ಒಪ್ಪಿಲ್ಲ. ಈ ಕುರಿತು ಪರಿಶೀಲನೆ ನಡೆಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದಿರುವ ಸರ್ಕಾರ 5 ವರ್ಷಗಳಿಗೆ ಪರಿಷ್ಖರಣೆ ನಡೆಸುತ್ತೇವೆ ಎಂಬ ಹಠಕ್ಕೆ ಅಂಟಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.
 
ಯೋಜನೆ ಜಾರಿಗೆ ಆಗ್ರಹಿಸಿ ನಿವೃತ್ತ ಸೈನಿಕರು ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು, ಕೇಂದ್ರ ಸರ್ಕಾರದ ಮೇಲೆ ಸಾಕಷ್ಟು ಒತ್ತಡ ಸೃಷ್ಟಿಯಾಗಿತ್ತು.  ಅವರ ಪ್ರಮುಖ ಬೇಡಿಕೆಯಂತೆ ವರ್ಷ ವರ್ಷ ಪಿಂಚಣಿ ಪರಿಷ್ಕರಣೆ ಮಾಡುವುದಕ್ಕೆ ಕೇಂದ್ರ ಒಪ್ಪದ್ದರಿಂದ ಒಮ್ಮತ ಮೂಡಿರಲಿಲ್ಲ.
 
ಮತ್ತೆರಡು ದಿನಗಳಲ್ಲಿ ಬಿಹಾರ ಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದು, ಇದನ್ನು ಗಮನದಲ್ಲಿಟ್ಟುಕೊಂಡು ಏಕ ಶ್ರೇಣಿ, ಏಕ ಪಿಂಚಣಿ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿ ಮಾಡಲಿದೆ.
 
2014ರ ಜುಲೈ 1ರಿಂದ ಪೂರ್ವಾನ್ವಯವಾಗುವಂತೆ ಯೋಜನೆಯನ್ನು ಅನುಷ್ಠಾನ ಮಾಡಲಾಗುತ್ತದೆ ಎನ್ನಲಾಗಿದೆ.  ಬಾಕಿ ಪಿಂಚಣಿ ನೀಡಲು ಸರ್ಕಾರಕ್ಕೆ 10ರಿಂದ 12 ಸಾವಿರ ಕೋಟಿ ರೂಪಾಯಿ ಖರ್ಚಾಗಬಹುದೆಂದು ಅಂದಾಜಿಸಲಾಗಿದೆ.
 
ಏಕ ಶ್ರೇಣಿ ಏಕ ಪಿಂಚಣಿ ಯೋಜನೆಯ ಕುರಿತು ಶೀಘ್ರ ನಿರ್ಧಾರ ಕೈಗೊಳ್ಳಬೇಕು ಎಂದು ಆರ್‌ಎಸ್‌ ಮುಖಂಡರು ಬುಧವಾರ ಮೋದಿ ಸರ್ಕಾರಕ್ಕೆ ಸೂಚಿಸಿದ್ದರು. 

ವೆಬ್ದುನಿಯಾವನ್ನು ಓದಿ