ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಮರಳಿ ತರಲು ಸರ್ಕಾರ ಪ್ರತಿಜ್ಞೆ

ಗುರುವಾರ, 10 ಮಾರ್ಚ್ 2016 (16:25 IST)
ನವದೆಹಲಿ: ವಿದೇಶಕ್ಕೆ ಪರಾರಿಯಾಗಿರುವ ಮದ್ಯದೊರೆ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಮರಳಿ ಕರೆತರುತ್ತೇವೆಂದು ಕೇಂದ್ರ ಸರಕಾರ ಗುರುವಾರ ಘೋಷಿಸಿದೆ.
ರಾಷ್ಟ್ರದ ಹಣ ತೆಗೆದುಕೊಂಡು ಪರಾರಿಯಾಗುವಂತಹ ಕೃತ್ಯವನ್ನು ಸರಕಾರ ಸಹಿಸಿಕೊಳ್ಳುವುದಿಲ್ಲ ಎಂದು ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ.

ವಿಜಯ್ ಮಲ್ಯ ವಿದೇಶಕ್ಕೆ ಪಲಾಯನ ಮಾಡಿರುವ ಪ್ರಕರಣ ಇಂದು ರಾಜ್ಯ ಸಭೆಯಲ್ಲಿ ಭಾರಿ ಕೋಲಾಹಲ ಉಂಟುಮಾಡಿದ್ದು, ಮಲ್ಯ ವಿದೇಶಕ್ಕೆ ಹಾರಲು ಮೋದಿ ಸರಕಾರ ಪರೋಕ್ಷವಾಗಿ ಸಹಾಯ ಮಾಡಿದೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ.
 
ದೇಶದ ವಿವಿಧ ಬ್ಯಾಂಕುಗಳಲ್ಲಿ 9 ಸಾವಿರ ಕೋಟಿಗೂ ಹೆಚ್ಚು ಸಾಲ ಬಾಕಿ ಉಳಿಸಿಕೊಂಡು ಕಾನೂನು ಕಟ್ಟಳೆಯನ್ನು ಎದುರಿಸುತ್ತಿರುವ ಉದ್ಯಮಿ ವಿಜಯ್ ಮಲ್ಯ ಅವರು ಈಗಾಗಲೇ ದೇಶ ಬಿಟ್ಟು ಹೋಗಿದ್ದಾರೆ ಎಂದು ನಿನ್ನೆ ಸುಪ್ರೀಂ ಕೋರ್ಟ್‌ಗೆ ಸರ್ಕಾರ ತಿಳಿಸಿದೆ.
 
ಪಾಸ್‌ಪೋರ್ಟ್‌ ರದ್ದುಗೊಳಿಸಿ, ಮಲ್ಯ ಅವರನ್ನು ವಿಚಾರಣೆಗೊಳಪಡಿಸಬೇಕು ಎಂದು ಬ್ಯಾಂಕುಗಳ ಒಕ್ಕೂಟ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಜಾರಣೆ ಸಡೆಸಿದ್ದ ಸುಪ್ರೀಂ ಕೋರ್ಟ್ ನಿನ್ನೆ ಮಲ್ಯ ಅವರಿಗೆ ನೋಟಿಸ್‌ ನೀಡಿದ್ದು, ಎರಡು ವಾರದೊಳಗೆ ಪ್ರತಿಕ್ರಿಯಿಸುವಂತೆ ಸೂಚಿಸಿದೆ.

ವೆಬ್ದುನಿಯಾವನ್ನು ಓದಿ