ಸರ್ಕಾರ ರಚನೆ ಬಗ್ಗೆ ನಿಲುವು ಸ್ಪಷ್ಟ ಪಡಿಸಿ: ಬಿಜೆಪಿ-ಮೆಹಬೂಬಾಗೆ ಕಾಶ್ಮೀರ ರಾಜ್ಯಪಾಲರ ಸೂಚನೆ

ಸೋಮವಾರ, 1 ಫೆಬ್ರವರಿ 2016 (17:00 IST)
ರಾಜ್ಯದಲ್ಲಿ ಸರ್ಕಾರ ರಚಿಸುವುದಕ್ಕೆ ಸಂಬಂಧಿಸಿದಂತೆ ಬಿಜೆಪಿ ಹಾಗೂ ಪಿಡಿಪಿ ಹೊಂದಿರುವ ನಿಲುವುಗಳ ಬಗ್ಗೆ ಚರ್ಚಿಸಲು ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲ ಎನ್.ಎನ್. ವೊಹ್ರಾ ನಾಳೆ ಸಭೆ ಕರೆದಿದ್ದಾರೆ.

ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಮತ್ತು ರಾಜ್ಯ ಬಿಜೆಪಿ ಮುಖ್ಯಸ್ಥ ಸತ್ ಪಾಲ್ ಶರ್ಮಾ ಅವರನ್ನು ರಾಜ್ಯಪಾಲರು ಸಭೆಗೆ ಆಹ್ವಾನಿಸಿದ್ದಾರೆ. 
 
ಮೂಲಗಳ ಪ್ರಕಾರ ರಾಜ್ಯಪಾಲರು ಪಿಡಿಪಿ ಮುಖ್ಯಸ್ಥೆಗೆ ರಾಜ್ಯಪಾಲರು ನಿನ್ನೆ ಸಂಜೆ ಫ್ಯಾಕ್ಸ್ ಕಳುಹಿಸಿದ್ದರು. ನಾಳೆ ಮಧ್ಯಾಹ್ನ ಮೆಹಬೂಬಾ ರಾಜ್ಯಪಾಲರನ್ನು ಭೇಟಿ ಮಾಡಲಿದ್ದಾರೆ. ಬಿಜೆಪಿ ಮುಖ್ಯಸ್ಥರು ಕೂಡ ವೋಹ್ರಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. 
 
ಪಕ್ಷದ ಪ್ರಧಾನ ಕಾರ್ಯದರ್ಶಿ ಅಶೋಕ್ ಕೌಲ್ ಅವರ ನಿವಾಸದಲ್ಲಿ ಇಂದು ಸಭೆ ನಡೆಸಲಿರುವ ರಾಜ್ಯ ಬಿಜೆಪಿ ನಾಯಕರು ಮುಂದಿನ ಕಾರ್ಯತಂತ್ರದ ಬಗ್ಗೆ ಚರ್ಚೆ ನಡೆಸಲಿದ್ದಾರೆ. ರಾಜ್ಯದಲ್ಲಿನ ರಾಜಕೀಯ ಮತ್ತು ಆರ್ಥಿಕ ಸಮಸ್ಯೆಗಳ ಪರಿಹಾರಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರ ಏನೆಲ್ಲಾ ಕ್ರಮ ಕೈಗೊಂಡಿದೆ ಎನ್ನುವುದನ್ನು ಪರಿಶೀಲಿಸಿದ ಬಳಿಕವೇ ಸರ್ಕಾರ ರಚನೆಗೆ ಮುಂದಾಗುವುದಾಗಿ ನಿನ್ನೆ ಮೆಹಬೂಬಾ ಹೇಳಿದ್ದರು. 
 
ರಾಜ್ಯಪಾಲರ ಪತ್ರದ ಹಿನ್ನೆಲೆಯಲ್ಲಿ ಪಿಡಿಪಿ ಸಹ ಶಾಸಕಾಂಗ ಪಕ್ಷದ ಸಭೆ ಕರೆದಿದೆ.

ವೆಬ್ದುನಿಯಾವನ್ನು ಓದಿ