ಒಆರ್‌ಒಪಿ ಜಾರಿಗೊಳಿಸಿದ ಕೇಂದ್ರ ಸರಕಾರ: ಸರಕಾರದ ಆಫರ್ ತಿರಸ್ಕರಿಸಿದ ಸೈನಿಕರು

ಶನಿವಾರ, 5 ಸೆಪ್ಟಂಬರ್ 2015 (18:20 IST)
ಮಾಜಿ ಸೈನಿಕರ ಒತ್ತಡಕ್ಕೆ ಮಣಿದ ಕೇಂದ್ರ ಸರಕಾರ ಒನ್ ರ್ಯಾಂಕ್ ಒನ್ ಪೆನ್ಶನ್ ಯೋಜನೆ ಜಾರಿಗೊಳಿಸುವುದಾಗಿ ಘೋಷಿಸಿದೆ. ಆದರೆ, ಸರಕಾರದ ಆಫರ್‌ನ್ನು ಮಾಜಿ ಸೈನಿಕರು ತಿರಸ್ಕರಿಸಿದ್ದಾರೆ. 
 
ಪ್ರತಿಭಟನಾ ನಿರತ ಮಾಜಿ ಸೈನಿಕರು ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರೊಂದಿಗೆ ಪ್ರತೇಯಕ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್, ಸರಕಾರ ಮಾಜಿ ಸೈನಿಕರಿಗೆ ನೀಡಿದ ವಾಗ್ದಾನದಂತೆ ಸಮಾನ ಶ್ರೇಣಿ ಸಮಾನ ಪಿಂಚಣಿ ಯೋಜನೆ ಜಾರಿಗೊಳಿಸಿದೆ ಎಂದು ಹೇಳಿದ್ದಾರೆ. 
 
ಕಳೆದ ನಾಲ್ಕು ದಶಕಗಳಿಂದ ನೆನೆಗುದಿಯಲ್ಲಿರುವ ಸಮಾನ ಶ್ರೇಣಿ ಸಮಾನ ಪಿಂಚಣಿ ಯೋಜನೆ ಜಾರಿಯಿಂದ ಕೇಂದ್ರ ಸರಕಾರದ ಬೊಕ್ಕಸಕ್ಕೆ 8000 ರಿಂದ 10,000 ಕೋಟಿ ರೂಪಾಯಿಗಳ ಹೊರೆಯಾಗಲಿದೆ. ಮುಂಬರುವ ವರ್ಷಗಳಲ್ಲಿ ಮತ್ತಷ್ಟು ಹೆಚ್ಚಳವಾಗಲಿದೆ. ಹಿಂದಿನ ಸರಕಾರ ಕೇವಲ 500 ಕೋಟಿ ರೂಪಾಯಿಗಳನ್ನು ಮೀಸಲಾಗಿರಿಸಿತ್ತು. ಆದರೆ, ಯೋಜನೆಯಿಂದ 10 ರಿಂದ 12 ಸಾವಿರ ಕೋಟಿ ರೂಪಾಯಿಗಳ ವೆಚ್ಚವಾಗಲಿದೆ ಎಂದು ತಿಳಿಸಿದ್ದಾರೆ. 
 
ಕೇಂದ್ರ ಸರಕಾರ ಸೇನಾ ತಜ್ಞರು ಮತ್ತು ಮಾಜಿ ಸೈನಿಕರೊಂದಿಗೆ ಹಲವಾರು ಬಾರಿ ಚರ್ಚಿಸಿದ ನಂತರ ನಿರ್ಧಾರ ಕೈಗೊಳ್ಳಲಾಗಿದೆ. ಐದು ವರ್ಷಗಳಿಗೊಮ್ಮೆ ಪರಿಷ್ಕರಣೆ ನಡೆಯಲಿದೆ ಎಂದರು.
 
ಸಮಾನ ಶ್ರೇಣಿ ಸಮಾನ ಪಿಂಚಣಿ ಯೋಜನೆ 2014ರ ಜುಲೈ 1 ರಿಂದ ಅನ್ವಯವಾಗಲಿದೆ ಎಂದು ಕೇಂದ್ರ ರಕ್ಷಣಾ ಖಾತೆ ಸಚಿವ ಮನೋಹರ್ ಪರಿಕ್ಕರ್ ಹೇಳಿದ್ದಾರೆ. 
 
ಸಮಾನ ಶ್ರೇಣಿ ಸಮಾನ ಪಿಂಚಣಿ ಯೋಜನೆ ಜಾರಿ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಮಾಜಿ ಸೇನಾಧಿಕಾರಿ ಸತ್ಬೀರ್ ಸಿಂಗ್, ಕಳೆದ ನಾಲ್ಕು ದಶಕಗಳಿಂದ ನೆನೆಗುದಿಯಲ್ಲಿದ್ದುದನ್ನು ಜಾರಿಗೊಳಿಸಲಾಗಿದೆ. ಆದರೆ ಸ್ವಯಂ ನಿವೃತ್ತಿ  ಪಡೆದವರನ್ನು ಯೋಜನೆಯಿಂದ ಹೊರಗಿಡುವುದಕ್ಕೆ ನಮ್ಮ ಒಪ್ಪಿಗೆಯಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ..
 

ವೆಬ್ದುನಿಯಾವನ್ನು ಓದಿ