ಪೆಯಿಕರುಂಬುವಿನಲ್ಲಿ ಕಲಾಂಗೆ ಪ್ರಧಾನಿ ಸೇರಿದಂತೆ ಗಣ್ಯರ ಅಂತಿಮ ನಮನ

ಗುರುವಾರ, 30 ಜುಲೈ 2015 (11:29 IST)
ಮಾಜಿ ರಾಷ್ಟ್ರಪತಿ, ಖ್ಯಾತ ವಿಜ್ಞಾನಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಪಾರ್ಥಿವ ಶರೀರವನ್ನು ರಾಮೇಶ್ವರಂ ಬಳಿಯ ಅಂತ್ಯಕ್ರಿಯೆಗೆ ನಿಗಪಡಿಸಲಾಗಿದ್ದ ಸ್ಥಳ ಪೆಯಿಕರುಂಬುವಿಗೆ ತರಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಅಂತಿಮ ನಮನ ಸಲ್ಲಿಸಿದರು. 
 
ರಕ್ಷಣಾ ಸಿಬ್ಬಂದಿಗಳೊಂದಿಗೆ ಆಗಮಿಸಿದ ಪ್ರಧಾನಿ ಮೋದಿ ಅವರು ಅಂತಿಮ ನಮನ ಸಲ್ಲಿಸಿದರು. ಬಳಿಕ ತಮಿಳುನಾಡು ರಾಜ್ಯಪಾಲ ರೋಸಯ್ಯ, ಕೇಂದ್ರ ಸಚಿವರುಗಳಾದ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಮತ್ತು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್, ತಮಿಳುನಾಡು ಹಣಕಾಸು ಸಚಿವ ಪನ್ನೀರ ಸೆಲ್ವಂ, ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಸೇರಿದಂತೆ ಇತರೆ ಗಣ್ಯರು ಭಾಗವಹಿಸಿ ಅಂತಿಮ ನಮನ ಸಲ್ಲಿಸಿದರು. ನೇಪಾಳ ಹಾಗೂ ಭೂತಾನ್ ನಿಂದಲೂ ಕೂಡ ಹಲವು ರಾಜಕೀಯ ಪ್ರತನಿಧಿಗಳು ಭಾಗವಹಿಸಿದ್ದಾರೆ. ಅಂತಿಮವಾಗಿ ಮುಸ್ಲಿಂ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಲಿದ್ದು, 12.30ಕ್ಕೆ ನೆರವೇರುವ ಲಕ್ಷಣಗಳಿವೆ. 
 
ಅಂತಿಮ ವಿಧಿ-ವಿಧಾನ ನಡೆಯುತ್ತಿರುವ ಈ ಸ್ಥಳಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಸಾರ್ವಜನಿಕರೂ ಕೂಡ ಆಗಮಿಸಿದ್ದು, ಕಲಾಂ ಅವರ ಅಂತಿಮ ದರ್ಶನ ಪಡೆಯುತ್ತಿದ್ದಾರೆ. 

ವಿಧಿ-ವಿಧಾನ ನೆರವೇರಿಸಲು ಮುಂದಾದ ಸೇನಾ ಸಿಬ್ಬಂದಿ ಗೌರವ ಸೂಚಕವಾಗಿ ಕಲಾಂ ಪಾರ್ಥಿವ ಶರೀರಕ್ಕೆ ಹೊದಿಸಲಾಗಿದ್ದ ರಾಷ್ಟ್ರ ತ್ರಿವರ್ಣ ಧ್ವಜದ ಬಟ್ಟೆಯನ್ನು ತೆರವುಗೊಳಿಸಿ ಮುಂದಿನ ಕಾರ್ಯಕ್ಕೆ ಮುಂದಾದರು. 
 
ಜುಲೈ 27ರಂದು ಹೃದಯಾಘಾತಕ್ಕೊಳಗಾಗಿ ಕೊನೆಯುಸಿರೆಳೆದಿದ್ದ ಕಲಾಂ ಅವರ ಪಾರ್ಥಿವ ಶರೀರವನ್ನು ರಾಷ್ಟ್ರ ರಾಜಧಾನಿ ದೆಹಲಿಯಿಂದ ನಿನ್ನೆ ವಿಶೇಷ ವಿಮಾನದ ಮೂಲಕ ರಾಮೇಶ್ವರಂಗೆ ತರಲಾಗಿತ್ತು. ನಿನ್ನೆ ಪೂರ್ತಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಇಂದು ಅಂತಿಮವಾಗಿ ಮುಸ್ಲಿಂ ಸಮುದಾಯದ ವಿಧಿವಿಧಾನಗಳಂತೆ ಅಂತ್ಯಕ್ರಿಯೆ ನೆರವೇರಿಸಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ