ಗುಜರಾತ್ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಫೆ.19 ರಂದು ಚುನಾವಣೆ

ಮಂಗಳವಾರ, 16 ಫೆಬ್ರವರಿ 2016 (19:42 IST)
ಉಹಾಪೋಹ ವರದಿಗಳನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ಬಿಜೆಪಿ ಹೈಕಮಾಂಡ್, ಫೆಬ್ರವರಿ 19 ರಂದು ಗುಜರಾತ್ ರಾಜ್ಯ ಘಟಕದ ಅಧ್ಯಕ್ಷರ ನೇಮಕ ಮಾಡಲಾಗುವುದು ಎಂದು ಘೋಷಿಸಿದೆ.
 
ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಅಭ್ಯರ್ಥಿಗಳು ಫೆಬ್ರವರಿ 19 ರಂದು 11 ರಿಂದ 12 ಗಂಟೆಯವರೆಗೆ ತಮ್ಮ ನಾಮಪತ್ರಗಳನ್ನು ಸಲ್ಲಿಸಬಹುದು. ನೂತನ ಅಧ್ಯಕ್ಷರ ಆಯ್ಕೆಯನ್ನು 12.39 ಗಂಟೆಗೆ ಘೋಷಿಸಲಾಗುವುದು ಎಂದು ತಿಳಿಸಿದೆ.
 
ಒಂದು ವೇಳೆ, ಒಬ್ಬರಿಗಿಂತ ಹೆಚ್ಚಿನ ವ್ಯಕ್ತಿಗಳು ನಾಮಪತ್ರ ಸಲ್ಲಿಸಿದಲ್ಲಿ ಚುನಾವಣೆ ನಡೆಸಲಾಗುವುದು ಇಲ್ಲವಾದಲ್ಲಿ 12.39 ಗಂಟೆಗೆ ಹೊಸ ಅಧ್ಯಕ್ಷರ ಹೆಸರನ್ನು ಬಹಿರಂಗಪಡಿಸಲಾಗುವುದು ಎಂದು ಬಿಜೆಪಿ ವಕ್ತಾರ ಐ.ಕೆ.ಜಡೇಜಾ ತಿಳಿಸಿದ್ದಾರೆ. 
 
ಗುಜರಾತ್ ಮುಖ್ಯಮಂತ್ರಿ ಆನಂದಿ ಬೆನ್ ಪಟೇಲ್, ರಾಜ್ಯದ ಬಿಜೆಪಿ ಉಸ್ತುವಾರಿ ದಿನೇಶ್ ಶರ್ಮಾ ಮತ್ತು ಆರ್‌.ಸಿ.ಫಾಲ್ದು ಅವರ ಸಮ್ಮುಖದಲ್ಲಿ ರಾಜ್ಯ ಘಟಕದ ಅಧ್ಯಕ್ಷರ ಹೆಸರನ್ನು ಘೋಷಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
 
ರಾಜಸ್ಥಾನದ ಬಿಜೆಪಿ ಸಂಸದ ಅರ್ಜುನ್ ಮೇಘವಾಲ್‌ರನ್ನು ಚುನಾವಣಾ ವೀಕ್ಷಕರನ್ನಾಗಿ ಹೈಕಮಾಂಡ್ ನೇಮಕ ಮಾಡಿದೆ.
 
ಒಂದು ವೇಳೆ, ಚುನಾವಣೆ ನಡೆದಲ್ಲಿ ರಾಜ್ಯದ ಶಾಸಕರು, ಸಂಸದರು, ಪಕ್ಷದ ಪದಾಧಿಕಾರಿಗಳು ಮತ್ತು ಇತರ ತಾಲೂಕಾ ಘಟಕಗಳ ಅಧ್ಯಕ್ಷರು ಸೇರಿದಂತೆ 135 ಮತದಾರರು ಮತಚಲಾಯಿಸಲಿದ್ದಾರೆ.

ವೆಬ್ದುನಿಯಾವನ್ನು ಓದಿ