ಗುಜರಾತ್ : ಅದೃಷ್ಟಕ್ಕಾಗಿ ಕಚೇರಿ ಬದಲಾಯಿಸಿದ ಕಾಂಗ್ರೆಸ್

ಗುರುವಾರ, 3 ಸೆಪ್ಟಂಬರ್ 2015 (16:39 IST)
ಗುಜರಾತ್ ಕಾಂಗ್ರೆಸ್, ಬುಧವಾರ ತಮ್ಮ ಮುಖ್ಯ ಕಚೇರಿಯನ್ನು ಪಲ್ದಿ ಪ್ರದೇಶದಿಂದ ಮೆಮ್‌ನಗರಕ್ಕೆ ಸ್ಥಳಾಂತರಿಸಿದೆ. 2001ರಲ್ಲಿ ಪಲ್ದಿ ಪ್ರದೇಶದಲ್ಲಿ ಕಚೇರಿ ಸ್ಥಾಪಿಸಿದ್ದಾಗಿಂದ ರಾಜ್ಯದ ಎಲ್ಲ ಪ್ರಮುಖ ಚುನಾವಣೆಯಲ್ಲಿ ಸೋಲುಣ್ಣುವಂತಾಗಿದೆ, ಈ ಕಚೇರಿ ಅಪಶಕುನ ಎಂದು ಪರಿಗಣಿಸಿರುವ ಕಾಂಗ್ರೆಸ್ ಮತ್ತೆ ಕಚೇರಿ ಬದಲಾಯಿಸಿದೆ ಎಂದು ಹೇಳಲಾಗುತ್ತಿದೆ. 
ಗುಜರಾತ್ ಕಾಂಗ್ರೆಸ್ (GPCC) ವಕ್ತಾರ ಮನೀಶ್ ದೋಶಿ ಹೇಳುವ ಪ್ರಕಾರ, ಭೌಗೋಳಿಕ ಅನುಕೂಲಗಳನ್ನು ಪರಿಗಣಿಸಿ ಮತ್ತು ಪಕ್ಷದ ಪ್ರತಿದಿನದ ಆಡಳಿತ ವ್ಯವಹಾರಗಳ ನಿರ್ವಹಣೆಗೆ ಸುಲಭವಾಗುವಂತೆ ಕಚೇರಿಯನ್ನು ಬದಲಾಯಿಸಲಾಗಿದೆ. 
 
ಪ್ರಸ್ತುತ ಕಾಂಗ್ರೆಸ್ ಕಚೇರಿ ಪಲ್ದಿ ಪ್ರದೇಶದ ವಿ.ಎಸ್ ಆಸ್ಪತ್ರೆ ಬಳಿ ಇದೆ. ರಾಜೀವ್ ಗಾಂಧಿ ಭವನ ಎಂದು ಕರೆಯಲ್ಪಡುವ ಈ ಕಚೇರಿ ನಾಲ್ಕು ಅಂತಸ್ತಿನ ಕಟ್ಟಡವನ್ನು ಹೊಂದಿದೆ. ಈಗ ಕಾಂಗ್ರೆಸ್ ಅದೇ ಗಾತ್ರದಲ್ಲಿರುವ ಬಹು ಮಹಡಿ ಕಟ್ಟಡವೊಂದಕ್ಕೆ ತನ್ನ ಕಚೇರಿಯನ್ನು ಬದಲಾಯಿಸುತ್ತಿದೆ. ಇದು ಬಾಡಿಗೆ ಕಚೇರಿಯಾಗಿದ್ದು ಮೆಮ್‌ನಗರ ಪ್ರದೇಶದಲ್ಲಿದೆ. ನಿನ್ನೆಯಿಂದಲೇ ಪೀಠೋಪಕರಣಗಳ ಸ್ಥಳಾಂತರವನ್ನು ಪ್ರಾರಂಭಿಸಲಾಗಿದೆ ಎಂದು ದೋಶಿ ತಿಳಿಸಿದ್ದಾರೆ. 
 
ಹೊಸ ಕಚೇರಿ ಅಧಿಕೃತವಾಗಿ ಸಪ್ಟೆಂಬರ್ 5ರಂದು ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭ ಮಹೂರ್ತದಲ್ಲಿ  ಉದ್ಘಾಟನೆಯಾಗಲಿದೆ. ನಮ್ಮ ಕಚೇರಿಯನ್ನು ವಿಸ್ತರಿಸಿದ್ದೇವೆ. ಬದಲಾಯಿಸಿಲ್ಲ. ಪಲ್ದಿಯಲ್ಲಿರುವ ಕಚೇರಿಯನ್ನು ಸಹ ಬಳಸುತ್ತೇವೆ", ಎಂದು ದೋಶಿ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ