ನಕಲಿ ಪದವಿ ಪ್ರಮಾಣ ಪತ್ರ: ಇದೀಗ ಗುಜರಾತ್ ಸಚಿವನ ಸರದಿ

ಮಂಗಳವಾರ, 13 ಅಕ್ಟೋಬರ್ 2015 (19:04 IST)
ನಕಲಿ ಪದವಿ ಪ್ರಮಾಣ ಪತ್ರಕ್ಕೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ ಮುಖಂಡ ಜಿತೇಂದ್ರ ತೋಮರ್ ನಂತರ ಇದೀಗ ಗುಜರಾತ್ ಸಚಿವ ಶಂಕರ್ ಚೌಧರಿ ಸರದಿ ಆರಂಭವಾಗಿದೆ.
 
ಗುಜರಾತ್ ಸಚಿವ ಶಂಕರ್ ಚೌಧರಿ ನಕಲಿ ಎಂಬಿಎ ಪದವಿ ಪ್ರಮಾಣ ಪತ್ರ ಪಡೆದಿದ್ದಾರೆ ಎಂದು ಆರೋಪಿಸಿ ದಾಖಲಾಗಿದ್ದ ದೂರನ್ನು ಪರಿಶೀಲಿಸಿದ ಹೈಕೋರ್ಟ್, ಸಚಿವ ಚೌಧರಿ ಎಂಬಿಎ ಪದವಿ ಪಡೆದಿರುವ ಬಗ್ಗೆ ತನಿಖೆ ನಡೆಸುವಂತೆ ಆದೇಶಿಸಿದೆ. 
 
ಪ್ರಸಕ್ತ ವರ್ಷದ ಆರಂಭದಲ್ಲಿಯೇ ದೆಹಲಿಯ ಕಾನೂನು ಸಚಿವರಾಗಿದ್ದ ಜಿತೇಂದರ್ ತೋಮರ್ ನಕಲಿ ಪದವಿ ಪಡೆದ ಆರೋಪದ ಮೇಲೆ ಸಚಿವ ಸ್ಥಾನ ತ್ಯಜಿಸಬೇಕಾಯಿತು. ಇದರಿಂದ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಇಕ್ಕಟ್ಟಿನಲ್ಲಿ ಸಿಲುಕಿಸಿತ್ತು.  
 
ಸಾಮಾಜಿಕ ಕಾರ್ಯಕರ್ತ ಫಾರ್ಸು ಗೋಕ್ಲಾನಿ ಗುಜರಾತ್ ಹೈಕೋರ್ಟ್‌ನಲ್ಲಿ ದೂರು ಸಲ್ಲಿಸಿ, 2011ರಲ್ಲಿ ಹೈಸ್ಕೂಲ್ ಪೂರೈಸಿದ್ದ ಸಚಿವ ಚೌಧರಿ 2012ರಲ್ಲಿ ಎಂಬಿಎ ಪದವಿ ಪಡೆಯಲು ಹೇಗೆ ಸಾಧ್ಯ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು.     
 
ಸಚಿವ ಚೌಧರಿ ಅಭ್ಯಾಸ ನಡೆಸಿದ್ದ ಶಾಲೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿದ್ದೇನೆ. ಚುನಾವಣೆ ಅಫಿಡವಿಟ್‌ನಲ್ಲಿ ಸಲ್ಲಿಸಿದಂತೆ ಹತ್ತನೇ ಅಥವಾ ಪಿಯುಸಿ ತರಗತಿ ಪಾಸಾದ ಒಂದೇ ವರ್ಷದಲ್ಲಿಯೇ ಎಂಬಿಎ ಪದವಿ ಹೇಗೆ ಪಡೆದರು ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ ಎಂದಿದ್ದಾರೆ.  
 
ಸಚಿವ ಶಂಕರ್ ಚೌಧರಿ ಎಂಬಿಎ ಪದವಿ ಪಡೆದ ಕಾಲೇಜು ನಕಲಿ ಅಂಕಪಟ್ಟಿ ಹಗರಣದಲ್ಲಿ ಭಾಗಿಯಾಗಿತ್ತು. ಸಚಿವ ಚೌಧರಿ ಕೂಡಾ ನಕಲಿ ಅಂಕಪಟ್ಟಿ ಪಡೆದಿರಬಹುದು ಎಂದು ಗೊಕ್ಲಾನಿ ಸಂಶಯ ವ್ಯಕ್ತಪಡಿಸಿದ್ದಾರೆ.
 
ನನ್ನ ವಿರುದ್ಧದ ನಕಲಿ ಅಂಕಪಟ್ಟಿ ಆರೋಪಗಳಲ್ಲಿ ಸತ್ಯಾಂಶವಿಲ್ಲ. ಹೈಕೋರ್ಟ್‌ಗೆ ನನ್ನ ಪದವಿಯ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತೇನೆ ಎಂದು ಸಚಿವ ಶಂಕರ್ ಚೌಧರಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ